December 14, 2024

Hampi times

Kannada News Portal from Vijayanagara

ಫೆ.02ರವರೆಗೆ ಹಂಪಿಯಲ್ಲಿ ವಿಜಯನಗರ ಮಹಾಸಾಮ್ರಾಜ್ಯದ ವೈಭವ ಅನಾವರಣ

 

https://youtu.be/NHc6OMSu0K4?si=SI_K4goOPEgwo6h2


ಹಂಪಿಯಲ್ಲಿ ವಿಜಯನಗರ ವೈಭವದ ಧ್ವನಿ ಬೆಳಕು ಸಾಂಸ್ಕೃತಿಕ ಪ್ರದರ್ಶನ : ಜ.27 ರಿಂದ ಫೆ.2ರವರೆಗೆ ಹಂಪಿ ಗಜಶಾಲೆ ಬಳಿ : ಪ್ರದರ್ಶನ ಸಂಪೂರ್ಣ ಉಚಿತ

ಹಂಪಿಟೈಮ್ಸ್ ಹೊಸಪೇಟೆ:

ವಿಶ್ವವಿಖ್ಯಾತ ಹಂಪಿ ಉತ್ಸವ ಅಂಗವಾಗಿ ಉತ್ಸವದ ಕಳಸದಂತಿರುವ ಧ್ವನಿ ಬೆಳಕು ಕಾರ್ಯಕ್ರಮ  ಜ,27ರಿಂದ ಆರಂಭಗೊಂಡಿದ್ದು,   ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ವಿಶ್ವವಿಖ್ಯಾತ ಹಂಪಿಯಲ್ಲಿ 7 ದಿನಗಳ ಕಾಲ ‘ವಿಜಯನಗರ ವೈಭವ’ ಶೀರ್ಷಿಕೆಯಡಿ ಧ್ವನಿ ಮತ್ತು ಬೆಳಕು ಸಾಂಸ್ಕೃತಿಕ ಪ್ರದರ್ಶನ ಸ್ಥಳೀಯ ಕಲಾವಿದರಿಂದ  ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಹಂಪಿಯ ಗಜಶಾಲೆ ಆವರಣದಲ್ಲಿ ಜ.27ರಿಂದ ಆರಂಭಗೊಂಡಿರುವ ಪ್ರದರ್ಶನವು ಮುಂದುವರೆದಿದ್ದು, ಹಂಪಿ ಉತ್ಸವದ ನಿಮಿತ್ತ ಮೂರು ದಿನಗಳ ಕಾಲ ವಿವಿಧ ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳ ನಡುವೆಯೂ ಸಾರ್ವಜನಿಕರು ಹಾಗೂ ಪ್ರವಾಸಿಗರು ಗಜಶಾಲೆಯತ್ತಲೂ ಧಾವಿಸಿ ಧ್ವನಿ ಬೆಳಕು ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ.


ವಿವಿಧ ಪ್ರದರ್ಶನ:
1994ರಲ್ಲಿ ಆರಂಭಗೊಂಡ ಧ್ವನಿ ಬೆಳಕು ಪ್ರದರ್ಶನವು ಇಲ್ಲಿಯವರೆಗೆ 15 ಬಾರಿ ಆಯೋಜನೆಗೊಂಡಿದೆ. ಕರ್ನಾಟಕ ವೈಭವ, ವಿಜಯನಗರ ವೈಭವ ಹಾಗೂ ಶ್ರೀಕೃಷ್ಣದೇವರಾಯ ಶೀರ್ಷಿಕೆಯಡಿ ವಿವಿಧ ಪ್ರದರ್ಶನಗಳು ನಡೆದಿದ್ದು, ಅತಿಹೆಚ್ಚು ಬಾರಿ ‘ವಿಜಯನಗರ ವೈಭವ’ ಪ್ರದರ್ಶನ ಕಂಡಿದೆ. ಉತ್ಸವ ಮುಗಿದ ನಂತರವು ಪ್ರದರ್ಶನ ಮುಂದುವರೆದಿದ್ದು, ಸ್ಥಳೀಯರೂ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.


ಆವರಣದಲ್ಲಿ ಕಿರು ವೇದಿಕೆಗಳು:
ವಿಜಯನಗರ ವೈಭದ ಪ್ರದರ್ಶನಕ್ಕಾಗಿ ಗಜಶಾಲೆ ಆವರಣದಲ್ಲಿ 15 ಕಿರು ವೇದಿಕೆಗಳನ್ನು ನಿರ್ಮಿಸುವ ಜೊತೆಗೆ ಪ್ರದರ್ಶನಕ್ಕೆ ಅನುಗುಣವಾಗಿ ಆದ್ದೂರಿ ಬೆಳಕು ವ್ಯವಸ್ಥೆ, ಬೆಳಕಿನ ಸಂಯೋಜನೆ ಕೈಗೊಳ್ಳಲಾಗಿದೆ. ಐತಿಹಾಸಿಕ ಸ್ಮಾರಕಗಳನ್ನು ಬಳಸಿಕೊಂಡು ಪ್ರದರ್ಶನ ನೀಡಲಾಗುತ್ತಿದ್ದು, ಪ್ರೇಕ್ಷಕರಿಗೆ ಗತವೈಭವ ದರ್ಶನವಾಗುತ್ತಿದೆ.


ಇತಿಹಾಸದ ಸಾಕ್ಷೀಕರಣ:
ಧ್ವನಿ ಬೆಳಕಿನ ಸಹಾಯದಿಂದ ವಿಜಯನಗರ ಸಾಮ್ರಾಜ್ಯದ ಪೂರ್ವ ಘಟನೆಗಳು ಸೇರಿದಂತೆ ಸಾಮ್ರಾಜ್ಯ ಉದಯಗೊಂಡ ಪರಿ, ರಾಜ ವಂಶಗಳ ಆಡಳಿತ, ಕಲಾ ಶ್ರೀಮಂತಿಕೆ, ಪ್ರವಾಸಿಗರ ಭೇಟಿ, ಮುತ್ತು ರತ್ನಗಳನ್ನು ಬಳ್ಳಗಳಲ್ಲಿ ಅಳೆಯುತ್ತಿದ್ದ ಬಜಾರು, ಸರ್ವಧರ್ಮ ಸಮನ್ವಯತೆ, ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕ ಕುರಿತ ಐತಿಹಾಸಿಕ ಘಟನೆಗಳನ್ನು ಧ್ವನಿ ಮತ್ತು ಬೆಳಕಿನ ನಡುವೆ ಗೀತಗಾಯನ, ನೃತ್ಯ ರೂಪಕ ಹಾಗೂ ಹಿನ್ನಲೆ ಧ್ವನಿ ಮೂಲಕ ಚರಿತ್ರೆ ಅನಾವರಣಗೊಳಿಸಲಾಗಿದೆ.


ವಚನ, ದಾಸ ಸಾಹಿತ್ಯದ ಮಾಹಿತಿ:
ವಿಜಯನಗರ ಸಾಮ್ರಾಜ್ಯ ಕಾಲಘಟ್ಟದಲ್ಲಿ ಪ್ರಚಲಿತವಾಗಿದ್ದ ವಚನ ಸಾಹಿತ್ಯ ಸೇರಿದಂತೆ ದಾಸಸಾಹಿತ್ಯವನ್ನು ಅನಾವರಣಗೊಳಿಸಲಾಗಿದೆ. ಬಸವಣ್ಣ, ಕನಕದಾಸರು, ಪುರಂದರದಾಸರು ಲೌಕಿಕ ಜಗತ್ತಿನ ಕುರಿತು ರಚಿಸಿದ ವಚನಗಳು ಹಾಗೂ ಕೀರ್ತನೆಗಳು ಮತ್ತು ಸಾಮಾಜಿಕ ಕ್ರಾಂತಿಯ ಸನ್ನಿವೇಶಗಳನ್ನು ಸಹ ಬಳಸಿಕೊಳ್ಳಲಾಗಿದೆ. ಜೊತೆಗೆ ಚಾಮರಸ ಕವಿ ರಚಿಸಿರುವ ಪ್ರಭುಲಿಂಗಲೀಲೆಯ ಅಲ್ಲಮ ಮತ್ತು ಮಾಯೆಯ ಮೃದಂಗ ಪ್ರಸಂಗವನ್ನು ಬಳಸಿಕೊಳ್ಳಲಾಗಿದೆ.


ಹಿನ್ನಲೆ ಧ್ವನಿಗೆ ತಾರಾ ಮೆರುಗು:

‘ವಿಜಯನಗರ ವೈಭವ’ ಪ್ರದರ್ಶನ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಾಗಿದೆ. ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರಿಂದ ಹಿನ್ನಲೆ ಧ್ವನಿ ನೀಡಲಾಗಿದೆ. ಸಾಹಸಸಿಂಹ ಸಿಂಹ ದಿ.ಡಾ.ವಿಷ್ಣುವರ್ಧನ್ ಅವರು ಶ್ರೀಕೃಷ್ಣದೇವರಾಯ ಪಾತ್ರಕ್ಕೆ, ಚಿನ್ನಾದೇವಿ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ಅವರು ಹಿನ್ನಲೆ ಧ್ವನಿ ನೀಡಿದ್ದಾರೆ. ಜೊತೆಗೆ ಸಿ.ಅರ್.ಸಿಂಹ, ಶ್ರೀನಾಥ್, ರಾಮಕೃಷ್ಣ, ಹಾಗೂ ಕಥಾ ನಿರೂಪಣೆಗೆ ಉಮಾಶ್ರೀ ಅವರ ಹಿನ್ನಲೆ ಧ್ವನಿಯನ್ನು ಬಳಸಿಕೊಳ್ಳಲಾಗಿದೆ.


ಧ್ವನಿ ಬೆಳಕಿನ ಮುಖ್ಯ ಆಕರ್ಷಣೆ ಲಕ್ಷ್ಮೀ :
ಧ್ವನಿ ಬೆಳಕು ಪ್ರದರ್ಶನದ ಪ್ರಮುಖ ಆಕರ್ಷಣೆ ಹಂಪಿಯ ಆನೆ ‘ಲಕ್ಷ್ಮೀ. ಪ್ರದರ್ಶನದ ಆರಂಭದಲ್ಲಿ, ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ ಸಂದರ್ಭ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಲಕ್ಷ್ಮೀ ಆನೆಯನ್ನು ಬಳಸಿಕೊಳ್ಳಲಾಗಿದೆ. ಅದರಲ್ಲೂ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಕೃಷ್ಣದೇವರಾಯ ಪಾತ್ರಧಾರಿ ಆನೆಯ ಮೇಲೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದೃಶ್ಯವಂತೂ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ.

ಫೆ.02ರವರೆಗೂ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು ವಿಜಯನಗರ ವೈಭವವನ್ನು ಕಣ್ತುಂಬಿಕೊಳ್ಳಬಹುದು ಎಂದು ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ನೋಡಲ್ ಅಧಿಕಾರಿ ಎಲ್.ಡಿ.ಜೋಷಿ ತಿಳಿಸಿದರು.

** 1997ರಿಂದ ಇಲ್ಲಿಯವರೆಗೆ ಪ್ರದರ್ಶನದಲ್ಲಿ ಪಾತ್ರನಿರ್ವಹಣೆ ಮಾಡಿದ್ದೇನೆ. ಶ್ರೀಕೃಷ್ಣದೇವರಾಯ, ಪ್ರೌಢದೇವರಾಯ, ಬಸವಣ್ಣ ಹಾಗೂ ಹರಿಹರ ಅಣ್ಣತಮ್ಮಂದಿರ ಪಾತ್ರಗಳನ್ನು ನಿರ್ವಹಿಸಿರುವ ಖುಷಿ ನನಗಿದೆ.
ಹಂಪಿ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಅದು ಧ್ವನಿ ಮತ್ತು ಬೆಳಕು ಪ್ರದರ್ಶನ. ಪ್ರೇಕ್ಷಕರಿಗೆ ಮುದಗೊಳಿಸುವ ಹಾಗೂ ಐತಿಹಾಸಿಕ ಗತವೈಭವದ ಬಗ್ಗೆ ತಿಳಿಸಿಕೊಡುವ ಪ್ರಮುಖ ಪ್ರದರ್ಶನ ಇದಾಗಿದೆ.
-ಡಾ.ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಕಲಾವಿದರು.

** ಮೊಟ್ಟಮೊದಲ ಬಾರಿಗೆ ‘ವಿಜಯನಗರ ವೈಭವ’ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದು, ಕಲಾ ಪ್ರದರ್ಶನ ನೀಡಿರುವುದು ಅದ್ಭುತ ಅನುಭವ ತಂದಿದೆ. ನೃತ್ಯ ಸಂಯೋಜಕರಾದ ಶ್ರೀನಿವಾಸ ಅವರ ನೇತೃತ್ವದಲ್ಲಿ 7 ದಿನಗಳ ಕಾಲ ತರಬೇತಿ ಪಡೆದು ಪ್ರದರ್ಶನ ನೀಡುತ್ತಿರುವೆ.
ಬಿ. ಕಾವ್ಯಾ, ನೃತ್ಯಪಟು, ಹೊಸಪೇಟೆ.

**  ಗಜಶಾಲೆ ಆವರಣದಲ್ಲಿ ಧ್ವನಿ-ಬೆಳಕು ಕಾರ್ಯಕ್ರಮ ಪ್ರದರ್ಶನ ನಿಜಕ್ಕೂ ವಿಜಯನಗರ ಸಾಮ್ರಾಜ್ಯದ ಇತಿಹಾಸ ಕಣ್ಣಿಗೆ ಕಟ್ಟುವಂತೆ ಅದ್ಭುತವಾಗಿ ಮೂಡಿಬಂದಿತು. ವೀಕ್ಷಕರಾದ ನಮ್ಮ ಕಣ್ಣೆದುರಲ್ಲೇ ನಡೆದಂತೆ ಭಾಸವಾಯಿತು.
– ಪವನ್ ಕೆ., ಸುಮಿತ್ರಮ್ಮ ಪ್ರೇಕ್ಷಕರು, ಹೊಸಪೇಟೆ.

 

 

ಜಾಹೀರಾತು
error: Content is protected !!