https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ :
ಚಲನಚಿತ್ರ ನಟ- ನಟಿಯರು, ಗಾಯಕರು, ಕಲಾವಿದರಿಗೆ ಸಿಕ್ಕಷ್ಟು ಆದ್ಯತೆ ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಮತ್ತು ವೈಚಾರಿಕತೆಗೆ ಸಿಗದೆ ಇದರಿಂದ ಈ ಕ್ಷೇತ್ರ ಹಿಂದೆ ಸರಿಯುತ್ತಿದೆ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾಘಂಟೆ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಹಂಪಿ ಉತ್ಸವದ ಎರಡನೇ ದಿನವಾದ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಸಾವಿರಾರು ಜನರು ಕವಿಗೋಷ್ಠಿ, ವಿಚಾರ ಸಂಕಿರಣಗಳಿಗೆ ಬಹಳ ಪ್ರೀತಿಯಿಂದ ಆಗಮಿಸಿ ವೈಚಾರಿಕತೆ, ಸಮಕಾಲೀನ ಬದುಕಿನ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಈಗ ಸಿನಿಮಾ ಹಾವಳಿ ಅಬ್ಬರದೊಳಗೆ ಕವಿಗೋಷ್ಠಿ ಮಾಡುವ ಸಂಕೀರ್ಣ ಸ್ಥಿತಿಯಲ್ಲಿದ್ದೇವೆ. ಈಗಿನ ದಿನಮಾನಗಳಲ್ಲಿ ಸಂತೆಯೊಳಗೆ ಸಂತನಾಗಿ ನಿಂತು ಕವಿತೆ ಓದುವುದು ಪ್ರಯಾಸದ ಕೆಲಸ. ಕವಿತೆಯ ಮೂಲಕ ಜನರಿಗೆ ವಿಚಾರ ಮುಟ್ಟಿಸಬೇಕು ಎಂಬುದು ಮುಖ್ಯವಾಗಬೇಕೆ ಹೊರತು ವಿದ್ವತ್ ಪ್ರದರ್ಶನ ಮುಖ್ಯವಲ್ಲ ಎಂದರು. ಕನ್ನಡ ಕಾವ್ಯ ಕುರಿತಂತೆ ನನ್ನ ಪರಿಕಲ್ಪನೆಯಂತೆ ವಿಶ್ವದೃಷ್ಠಿ, ಲೋಕ ದೃಷ್ಟಿ ಎಂಬ ಎರಡು ದೃಷ್ಟಿಗಳಿವೆ. ವಿಶ್ವದೃಷ್ಟಿಯಲ್ಲಿ ಭೂಮಿ, ಆಕಾಶ, ಸೂರ್ಯ, ಚಂದ್ರ, ಪಶು ಪಕ್ಷಿ, ಗಿಡ, ಮರ ಎಲ್ಲವೂ ಇವೆ. ಅದರಂತೆ ಲೋಕದೃಷ್ಠಿಯಲ್ಲಿ ಸಾಂಸ್ಕೃತಿಕ ನಾಯಕರು, ಸಮಾಜ ಸುಧಾರಕರು ಮಾನವೀಯತೆ ಎತ್ತಿ ಹಿಡಿಯುವ ಸಲುವಾಗಿ ಬದುಕನ್ನು ಸಂಬAಧದ ನೆಲೆಯಿಂದ ಕಟ್ಟಬೇಕು ಎಂಬ ತುಡಿತವಿದೆ. ಈ ಎರಡು ದೃಷ್ಟಿಗಳು ಸಹ ಪರಸ್ಪರ ಪೂರಕವಾಗಿವೆ. ಆದರೆ ಲೋಕದೃಷ್ಟಿಯ ಚಹರೆಗಳು ಬಹಳ ಭಿನ್ನವಾಗಿವೆ ಎಂದರು.
ಪ್ರಾಚೀನ ಕಾಲದಿಂದಲೂ ಇಂದಿನವರೆಗೂ ಕವಿಗಳು ನಿರಂತರವಾಗಿ ಪ್ರತಿಪಕ್ಷದ ಕೆಲಸ ಮಾಡಬೇಕು ಎಂಬ ಹಂಬಲ ಪಂಪನಿAದ ಮೊದಲ್ಗೊಂಡು ಇಂದಿನವರೆಗೂ ಅದು ನಡೆಯುತ್ತಿದೆ. ಅದು ಕೆಲವೊಮ್ಮೆ ಹೆಚ್ಚಾಗಿರುತ್ತದೆ ಹಾಗೂ ಗೌಣವಾಗಿದ್ದು, ಇದು ಕಾಲಕ್ಕೆ ಬಿಟ್ಟಂತಹ ಸಂಗತಿಯಾಗಿದೆ. ಲೋಕಸತ್ಯ ಹೇಳವುದಕ್ಕೆ ನಮ್ಮ ಕವಿಗಳು ಧೈರ್ಯ ಮತ್ತು ಶಕ್ತಿಯನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಲೋಕಾಸತ್ಯಗಳಿಗೆ ಮುಖಾಮುಖಿಯಾಗಲು ಹಿಂಜರಿಕೆಯಾಯಿತು. ಇದಕ್ಕೆ ಜಾಗತೀಕರಣ, ತಂತ್ರಜ್ಞಾನದ ಪ್ರಭಾವದ ಕಾರಣವೂ ಇದೆ ಎಂದರು.
ಸಾಹಿತ್ಯ ನಿರಂತರವಾಗಿ ಪ್ರಭುತ್ವದೊಂದಿಗೆ ಗುದ್ದಾಟ, ವಾಗ್ವಾದ ಮತ್ತು ಪ್ರಶ್ನೆಗಳನ್ನು ಕೇಳುತ್ತಲೇ ಇರುವುದನ್ನು ನೋಡಬಹುದಾಗಿದೆ. ಇಂದು ಲೇಖಕ ಸೂಕ್ಷ್ಮ ನೆಲೆ, ಸಂಕೀರ್ಣವಾದ ಸ್ಥಿತಿಯಲ್ಲಿದ್ದಾನೆ. ಏನು ಮಾತನಾಡಿದರೇ ಏನು ಆಗುತ್ತದೆಯೋ ಎಂಬ ಭಯ ಎಲ್ಲರನ್ನು ಆವರಿಸಿಕೊಂಡಿರುವ ಅಂಧಕಾರದ ಕತ್ತಲೆಯೊಳಗೆ ನಮ್ಮ ಅಂತಃ ಶಕ್ತಿಯ ಮೂಲಕ ಬೆಳಕು ಹುಡುಕಬೇಕು ಎಂದು ಕಿವಿಮಾತು ಹೇಳಿದರು.
ನಿರ್ಲಪ್ತತತೆ ಸಲ್ಲದು: ನಾವು ನಮಗೆ ಯಾವುದೇ ಸಂಬAಧ ಇಲ್ಲದಂತೆ ನಿರ್ಲಪ್ತತೆ ಮನೋಭಾವದಿಂದ ಬದುಕು ನಡೆಸುತ್ತಿದ್ದೇವೆ. ಈ ನಿರ್ಲಪ್ತತತೆ ಬಂದ ಕಾರಣದಿಂದ ಸಾಮೂಹಿಕ ಪ್ರತಿಭಟನೆ ಕಾಣುತ್ತಿಲ್ಲ. ಯಾರಿಗಾದರೂ ಆಪತ್ತು ಎದುರಾದಾಗ ಎಲ್ಲರೂ ಸಾಮೂಹಿಕ ಪ್ರತಿಭಟನೆ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆ, ಜವಾಬ್ದಾರಿಯಿಂದ ನುಣಚಿಕೊಂಡ ಕಾರಣಕ್ಕಾಗಿ ಏಕಾಂಗಿಯಾಗಿ, ನೋವುಗಳಿಗೆ ಒಳಗಾಗಿದ್ದೇವೆ ಎಂದರು.
ಕಲಬುರಗಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಡಾ.ಹೆಚ್.ಟಿ.ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿಗಳು ಮೌನಮುರಿಯಬೇಕು. ಮೌನ ಮುರಿದು ಮಾತನಾಡಿ ಹೊಸ ಸಮಾಜ ನಿರ್ಮಿಸಲು ಶ್ರಮಿಸಬೇಕು. ನಿತ್ಯ ನಿರಂತರವಾಗಿ ಜನರ ಸಮಸ್ಯೆಗಳಿಗೆ ಕವಿಗಳು ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಸಂಚಾಲಕ ಡಾ.ಕೆ.ರವೀಂದ್ರ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಇದ್ದರು.
More Stories
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ