https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ :
ರಾಜ ಮಹಾರಾಜರುಗಳ ಚರಿತ್ರೆ ಜೊತೆಗೆ ಜಾನಪದಗಳ ಐತಿಹ್ಯದೊಂದಿಗೆ ಹಂಪಿ ಸ್ಮಾರಕಗಳ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಸ.ಚಿ.ರಮೇಶ್ ಹೇಳಿದರು.
ಹಂಪಿ ಉತ್ಸವದ ಅಂಗವಾಗಿ ಶ್ರೀ ವಿರೂಪಾಕ್ಷ ದೇವಾಲಯ ವೇದಿಕೆಯಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಹಂಪಿ ಪ್ರವಾಸೋದ್ಯಮ: ಸಾಧ್ಯತೆ ಮತ್ತು ಅವಕಾಶಗಳ ಕುರಿತ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಂಪಿಯ ಸುತ್ತಮುತ್ತಲಿನ ಸ್ಮಾರಕಗಳ ಕುರಿತು ಜನಪದ ಇತಿಹಾಸ ತಿಳಿದುಕೊಂಡರೆ ರೋಮಾಂಚಕವಾಗುತ್ತದೆ. ತೆನಾಲಿ ರಾಮ ಮಂಟಪ, ಸೀತೆ ಸೆರುಗು, ಚಕ್ರತೀರ್ಥ, ಅಕ್ಕ ತಂಗಿಯರ ಬೆಟ್ಟ ಸೇರಿದಂತೆ ಅನೇಕ ಸ್ಮಾರಕಗಳ ಬಗ್ಗೆ ಜನಪದಲ್ಲಿ ಐತಿಹ್ಯ ವಿಭನ್ನವಾಗಿ ಮೂಡಿದೆ. ಜನಪದಗಳು ಸ್ಮಾರಕಗಳ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುತ್ತವೆ. ಪ್ರವಾಸಿ ಮಾರ್ಗದರ್ಶಕರು ಹಂಪಿ ಕುರಿತು ಸತ್ಯವಾದ ಚರಿತ್ರೆ ಹೇಳಬೇಕು. ಸುಳ್ಳು ಹಾಗೂ ರಂಜನೀಯ ವಸ್ತುಗಳನ್ನು ಹೇಳಬಾರದು. ಕನ್ನಡ ವಿ.ವಿ. ವತಿಯಿಂದ ಮಾರ್ಗದರ್ಶಕರಿಗೆ ಈ ಕುರಿತು ವಿಶೇಷ ತರಬೇತಿ ನೀಡಲಾಗಿದೆ.
ಪಾರಂಪರಿಕ ಸ್ಮಾರಕಗಳ ನಿರ್ವಹಣೆ ಹಾಗೂ ರಕ್ಷಣೆಗೆ ಪ್ರತ್ಯೇಕ ನೀತಿ ನೀರೂಪಣೆಗಳನ್ನು ಸರ್ಕಾರ ರೂಪಿಸಬೇಕು. ಸಾರ್ವಜನಿಕರು ಸ್ಮಾರಕಗಳ ಮೇಲೆ ಹೆಸರು ಕೆತ್ತುವ ಕೆಲಸ ಮಾಡಿ ಸ್ಮಾರಕಗಳನ್ನು ವಿರೂಪಗೊಳಿಸುತ್ತಾರೆ. ಸ್ಮಾರಕಗಳ ಸುತ್ತಲೂ ಹುಲ್ಲುಗಾವಲು ಬೆಳೆಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕುಳಿತುಕೊಳ್ಳಲು ಬೆಂಚುಗಳನ್ನು ಅಳವಡಿಸಬೇಕು. ಮರಗಳನ್ನು ಬೆಳಸಿ ಪ್ರಾಕೃತಿಕವಾಗಿ ನೆರಳು ದೊರೆಯುವಂತೆ ಮಾಡಬೇಕು. ಸದ್ಯ ಬಹಳಷ್ಟು ಸ್ಮಾರಕಗಳ ಬಳಿ ಚರಿತ್ರೆ ತಿಳಿಸುವ ಮಾಹಿತಿ ಫಲಕ ಇಲ್ಲ. ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಬೇಕು. ಪ್ರಾವಾಸೋದ್ಯಮ ಸವಲತ್ತುಗಳು ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರ ಮೂಲಕ ಆದಾಯ ಹೆಚ್ಚುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸುತ್ತ ಮುತ್ತಲಿನ ವಾಣಿಜ್ಯ ಚಟುವಟಿಕೆಗಳು ಅಭಿವೃದ್ಧಿ ಆಗುತ್ತವೆ. ವಿದೇಶಿ ಹಾಗೂ ಅನ್ಯ ರಾಜ್ಯದ ದೇಶಿ ಪ್ರವಾಸಿಗರು ಎದುರಿಸುವ ಸವಾಲು ಹಾಗೂ ಸಮಸ್ಯೆಗಳು ಬಗ್ಗೆ ಗಮನ ಹರಿಸಬೇಕು. ಇವರಿಗೆ ದೇಶಿ ಉಡುಗೆ ತೊಡುಗೆ, ಆಹಾರ ಪದ್ದತಿಯನ್ನು ತಿಳಿಪಡಿಸಬೇಕು. ಹಂಪಿಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಇಲ್ಲಿನ ಚರಿತ್ರೆಯನ್ನು ಸಾರುತ್ತಾನೆ. ಹಂಪಿ ಪ್ರವಾಸದಲ್ಲಿ ವಸತಿ ಮತ್ತು ಹೋಟಲ್ಗಳು ಬಹಳ ಮುಖ್ಯ. ಇವು ಅಚ್ಚುಕಟ್ಟಾಗಿ ಇರಬೇಕು. ಇದರಿಂದ ಹೋಟೆಲ್ ಉದ್ದಿಮೆ ಅಭಿವೃದ್ಧಿಯಾಗುತ್ತದೆ. ಇವಷ್ಟೇ ಅಲ್ಲದೆ ಸಾರಿಗೆ, ಆಟಿಕೆ, ಕಲಾವಿದರಿಗೂ ಪ್ರವಾಸೋದ್ಯಮದಿಂದ ಕೆಲಸ ದೊರತಿದೆ. ಹಂಪಿ ನೋಡಲು ಕಾಲಬೇಕು. ಕನಕಗಿರಿ ನೋಡಲು ಕಣ್ಣುಬೇಕು ಎಂಬ ನಾಣ್ನುಡಿ ಜನರಲ್ಲಿ ಪ್ರಚಲಿತದಲ್ಲಿದೆ. ವಿಶಾಲವಾದ ಹಂಪಿ ವೀಕ್ಷಣೆಗೆ ಸೂಕ್ತ ಸಾರಿಗೆ ವ್ಯವಸ್ಥೆ ರೂಪಿಸಬೇಕು ಎಂದರು.
ಹಂಪಿ ವಿ.ವಿ.ಕುಲಸಚಿವ ಡಾ.ಎ.ಸುಬ್ಬಣ್ಣರೈ ಮಾತನಾಡಿ ರಾಜ್ಯದ ಪ್ರಾಕೃತಿಕ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಕೇರಳ ಪ್ರವಾಸೋದ್ಯಮದಲ್ಲಿ ಬಹಳಷ್ಟು ಮುಂದುವರಿದೆ.ಇದನ್ನು ನೋಡಿ ನಾವು ಕಲೆಯಬೇಕು. ಕರ್ನಾಟಕದಲ್ಲಿ ಕೃತಕ ಪ್ರವಾಸಿ ತಾಣಗಳ ನಿರ್ಮಾಣದ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಸಾಕಷ್ಟು ಐತಿಹಾಸಿಕ, ಪಾರಂಪರಿಕ ಹಾಗೂ ಪ್ರಾಕೃತಿಕ ಸ್ಥಳಗಳಿವೆ. ಇವುಗಳಿಗೆ ಮೂಲಭೂತ ಸೌಕರ್ಯ ದೊರಕಿಸಿ ಪ್ರವಾಸೋದ್ಯಮಕ್ಕೆ ಇಂಬು ನೀಡಬೇಕು ಎಂದರು.
ಮೈಸೂರು ವಿ.ವಿ.ವಿಶ್ರಾಂತ ಕುಲಪತಿ ಡಾ.ಸಿ.ಮಹದೇವ ವಿಚಾರಗೋಷ್ಠಿ ಉದ್ಘಾಟಿಸಿದರು. ಹಂಪಿ.ವಿ.ವಿ ಪ್ರಾಧ್ಯಾಪಕ ಡಾ.ಮಾಧವ ಪರಾಜೆ, ಹಣಕಾಸು ಅಧಿಕಾರಿ ಡಾ. ರಮೇಶ್ ನಾಯಕ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಚಲುವರಾಜು ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಗೋಷ್ಠಿಯ-1 ರಲ್ಲಿ ವಿಶ್ವ ಪಾರಂಪರಿಕ ತಾಣ ಹಂಪಿ ಕುರಿತು ಪ್ರಾಧ್ಯಾಪಕ ಡಾ.ರಮೇಶ ನಾಯಕ, ಪಾರಂಪರಿಕ ತಾಣಗಳ ನಿರ್ವಹಣೆ ನೀತಿ, ನಿಯಮಗಳು ಕುರಿತು ಕಮಲಾಪುರ ಎ ಎಸ್ ಐ ಡಾ.ರವಿಕುಮಾರ್, ಅನುಷ್ಠಾನ ಮತ್ತು ಸಮಸ್ಯೆಗಳು ಕುರಿತು ಎ.ಎಸ್.ಐ ಡಾ.ಮಂಜನಾಯ್ಕ, ಪ್ರವಾಸೋದ್ಯಮದ ಮೂಲಭೂತ ಸೌಕರ್ಯಗಳ ನಿರ್ವಹಣೆ ಕುರಿತು, ಪ್ರಾಧ್ಯಾಪಕ ಡಾ. ಎಸ್.ವೈ ಸೋಮಶೇಖರ್ ವಿಷಯ ಮಂಡಿಸಿದರು.
ಗೋಷ್ಠಿ-2 ರಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳು ಮತ್ತು ಉದ್ಯೋಗಾವಕಾಶಗಳು ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಸಿದ್ದಪ್ಪ ವಿಷಯ ಮಂಡಿಸಿದರು. ದೇಶಿ ಮತ್ತು ವಿದೇಶಿ ಪ್ರವಾಸಿಗರು ಸಮಸ್ಯೆ ಮತ್ತು ಸವಾಲುಗಳು ಕುರಿತು ಪ್ರಾಧ್ಯಾಪಕ ಡಾ. ಎನ್.ಚಿನ್ನಸ್ವಾಮಿ ಸೋಸಲೆ, ಪ್ರವಾಸಿ ಮಾರ್ಗದರ್ಶಕರು ಕುರಿತು ಪ್ರಾಧ್ಯಾಪಕ ಡಾ.ಹೆಚ್.ಎಂ.ತಿಪ್ಪೇಶ, ಹಂಪಿ ಪ್ರವಾಸ ಮತ್ತು ಹೋಟೆಲ್ ಉದ್ಯಮ ಕುರಿತು ಮಲ್ಲಿಗೆ ಹೊಟೇಲ್‌ನ ಪಿ.ಎನ್.ಶ್ರೀಪಾದ್ ವಿಷಯ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಸಮ್ಮದ್ ಕೊಟ್ಟೂರು, ಪಂಪಯ್ಯಸ್ವಾಮಿ ಮಳೀಮಠ, ಶಿವಶಂಕರ ಬಣಕಾರ, ಡಾ.ಉಮೇಶ ಸೂರಮ್ಮನಹಳ್ಳಿ, ಹಂಪಿ ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.
More Stories
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ