https://youtu.be/NHc6OMSu0K4?si=SI_K4goOPEgwo6h2
- ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸುವಂತಹ ಕಾರ್ಯಕ್ರಮಗಳ ಆಯೋಜನೆ
- 3 ಸಾವಿರ ಕಲಾವಿದರುಗಳಿಂದ ವಿವಿಧ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು
- ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಕಲಾವಿದರುಗಳಿಂದ ಸಂಗೀತ ಸಂಜೆ
- ಲಕ್ಷಾಂತರ ಜನರು ಸೇರುವ ನಿರೀಕ್ಷೆ
ಹಂಪಿಟೈಮ್ಸ್ ಹೊಸಪೇಟೆ : ಹಂಪಿ ಉತ್ಸವ – 2023 ರ ಅದ್ದೂರಿ ಆಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಮರುಕಳಿಸುವಂತಹ ಕಾರ್ಯಕ್ರಮಗಳನ್ನ ಜಿಲ್ಲಾಡಳಿತ ಆಯೋಜಿಸಿದೆ. ಜನವರಿ 26 ರ ಸಂಜೆಯಿಂದ ಪ್ರಾರಂಭವಾಗಲಿರುವ ಕಾರ್ಯಕ್ರಮಗಳು ಜನವರಿ 29 ರ ತಡರಾತ್ರಿಯವರೆಗೆ ನಡೆಯಲಿವೆ. ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರಿಂದ ಜನವರಿ 25, 2023 ರ ಸಂಜೆ ತುಂಗಾ ಆರತಿ ಕಾರ್ಯಕ್ರಮದ ಉದ್ಘಾಟನೆಯ ಮೂಲಕ ಉತ್ಸವದ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದೆ.
ಸಿಎಂ ಬೊಮ್ಮಾಯಿ ಅವರಿಂದ ಹಂಪಿ ಉತ್ಸವ ಉದ್ಘಾಟನೆ:
ಜನವರಿ 27 ರಂದು ಸಂಜೆ ಹಂಪಿ ಉತ್ಸವ 2023 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರ ಘನ ಉಪಸ್ಥಿತಿ, ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರುಗಳಾದ ಆರ್. ಅಶೋಕ್, ಬಿ. ಶ್ರೀರಾಮುಲು, ಆರಗ ಜ್ಞಾನೇಂದ್ರ, ಭೈರತಿ ಬಸವರಾಜು, ವಿ ಸುನೀಲ್ ಕುಮಾರ್, ಹಾಲಪ್ಪ ಬಸಪ್ಪ ಆಚಾರ್ ಉಪಸ್ಥಿತರಿರಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸ್ಥಳೀಯ ಕಲಾವಿದರುಗಳಿಗೆ ಆದ್ಯತೆ ನೀಡಲು ನಾಲ್ಕು ವೇದಿಕೆಗಳ ನಿರ್ಮಾಣ:
1. ಗಾಯತ್ತಿ ಪೀಠ ವೇದಿಕೆ, 2. ಎದುರು ಬಸವಣ್ಣ ವೇದಿಕೆ, 3. ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ ಮತ್ತು 4. ಸಾಸಿವೆ ಕಾಳು ಗಣಪನ ಎದುರು ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದೆ. ತ್ರೀಡಿ ತಂತ್ರಜ್ಞಾನದಲ್ಲಿ ರಚಿಸಲಾಗಿರುವ ಮುಖ್ಯ ವೇದಿಕೆ ಎಲ್ಲರ ಗಮನ ಸೆಳೆಯಲಿದೆ. ಸ್ಥಳೀಯ ಕಲಾವಿದರುಗಳಿಗೆ ಆದ್ಯತೆ ಹಾಗೂ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ 1 ಮುಖ್ಯ ವೇದಿಕೆ ಹಾಗೂ 3 ಸಣ್ಣ ವೇದಿಕೆಯನ್ನು ನಿರ್ಮಿಸಲಾಗಿದೆ. ಸ್ವೀಕರಿಸಿದ್ದ 12 ಸಾವಿರ ಅರ್ಜಿಗಳಲ್ಲಿ 3 ಸಾವಿರ ಕಲಾವಿದರುಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿದೆ.
ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವಂತಹ ಕಾರ್ಯಕ್ರಮಗಳ ಆಯೋಜನೆ:
ಜನರನ್ನ ರಂಜಿಸಲಿರುವ 3 ಜನ ಬಾಲಿವುಡ್ ಮತ್ತು 3 ಜನ ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು:
ಬಾಲಿವುಡ್ ನ ಖ್ಯಾತ ಕಲಾವಿದರು ಮೂರು ದಿನಗಳ ಕಾಲ ಸಂಜೆ ಜನರಿಗೆ ತಮ್ಮ ಸಂಗೀತ ಸುಧೆಯ ರಸದೌತಣ ಬಡಿಸಲಿದ್ದಾರೆ. 27 ರಂದು ಸಂಜೆ ಅರ್ಜುನ್ ಜನ್ಯ ಹಾಗೂ ತಂಡದಿಂದ ಸಂಗೀತ ರಸಸಂಜೆ, ಖ್ಯಾತ ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಹಾಗೂ ತಂಡದಿಂದ ಬಾಲಿವುಡ್ ರಸಮಂಜರಿ ಆಯೋಜಿಸಲಾಗಿದೆ. ಜನವರಿ 28 ರಂದು ಸಂಜೆ ಖ್ಯಾತ ಸ್ಯಾಂಡಲ್‌ವುಡ್ ಗಾಯಕರಾದ ರಘುದೀಕ್ಷಿತ್ ಮತ್ತು ತಂಡ ಹಾಗೂ ಬಾಲಿವುಡ್ ನ ಖ್ಯಾತ ಗಾಯಕರಾದ ಅರ್ಮಾನ್ ಮಲ್ಲಿಕ್ ಹಾಗೂ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜನವರಿ 29 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ಕಲಾವಿದರಾದ ವಿಜಯಪ್ರಕಾಶ್ ಮತ್ತು ತಂಡ ಹಾಗೂ ಬಾಲಿವುಡ್‌ನ ಕೈಲಾಶ್ ಖೇರ್ ತಂಡ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವಿಜಯನಗರ ವಸಂತ ವೈಭವ ಮೆರವಣಿಗೆ ಕಾರ್ಯಕ್ರಮ:
ಹಂಪಿ ಉತ್ಸವ – 2023 ದ ಮೆರಗನ್ನ ಹೆಚ್ಚಿಸುವ ನಿಟ್ಟಿನಲ್ಲಿ ಜನವರಿ 26 ರ ಸಂಜೆ ನಾಲ್ಕು ಗಂಟೆಯಿಂದ ವಸಂತ ವೈಭವ ಮೆರವಣಿಗೆಯನ್ನ ಆಯೋಜಿಸಲಾಗಿದೆ.
ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ನೂರಕ್ಕೂ ಹೆಚ್ಚು ಕಲಾತಂಡಗಳು, ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ, ಚಂಡೆ ವಾದನ, ಝಾಂಜ್ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಕಂಸಾಳೆ, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು, ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ಸಿಂಧೋಳ್ ಕುಣಿತ, ತಾಷಾರಂಡೋಲ್, ಗೊಂದಲಿಗರಹಾಡು, ಗೊರವರ ಕುಣಿತ, ಕೇರಳ ತಂಡದಿಂದ ಪೂಜಾಕುಣಿತ, ಕಾಳೆವೇಷಂ, ಕಥಕಳಿ, ಪಂಜಾಬಿ ಡೋಲ್, ತಮಿಳುನಾಡಿನ ತಂಡದಿಂದ ಕೋಳೀನೃತ್ಯ, ಆಂಧ್ರಪ್ರದೇಶದ ಗೊರವರ ಕುಣಿತ ಹೀಗೆ ಹಲವಾರು ನೃತ್ಯ ಪ್ರಕಾರಗಳ ಮೆರವಣಿಗೆ ನಡೆಯಲಿದೆ.
ತುಂಗಾ ಆರತಿ ಮಹೋತ್ಸವ:
ಜನವರಿ 25 ರಂದು ಸಂಜೆ 6 ಗಂಟೆಗೆ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಹತ್ತಿರದ ತುಂಗಾನದಿಯ ತಟದಲ್ಲಿ ತುಂಗಾ ಆರತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅ ಜೊಲ್ಲೆ ಉದ್ಘಾಟಿಸುವರು. ಈ ಕಾರ್ಯಕ್ರಮದ ಮೂಲಕ ಹಂಪಿ ಉತ್ಸವದ ಚಟುವಟಿಕೆಗಳಿಗೆ ಅಧಿಕೃತವಾಗಿ ಅವರು ಚಾಲನೆ ನೀಡುವರು.
ಇದಲ್ಲದೆ, ಲೇಸರ್ ಶೋ, ಮರಳು ಶಿಲ್ಪಕಲೆ, ಮತ್ಸ್ಯಮೇಳ, ಹಂಪಿ ಬೈ ಸ್ಕೈ, ಫಲ ಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ, ಕರಕುಶಲ, ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳಾದ (ಕುಸ್ತಿ, ಗುಂಡು/ಚೀಲ ಎತ್ತುವುದು ಹಾಗೂ ಇತರೆ ಗ್ರಾಮೀಣ ಕ್ರೀಡೆಗಳು), ಕವಿಗೋಷ್ಠಿ, ವಿಚಾರ ಸಂಕಿರಣ, ಸಾಹಸ ಕ್ರೀಡೆಗಳು, ವಿಜಯನಗರ ಸಾಮ್ರಾಜ್ಯದ ಕುರಿತು ಧ್ವನಿ ಮತ್ತು ಬೆಳಕು ಪ್ರದರ್ಶನ ಮತ್ತು ಜಲಕ್ರೀಡೆಗಳನ್ನು ಆಯೋಜಿಸಲಾಗಿದೆ.
” ಅದ್ದೂರಿ ಹಂಪಿ ಉತ್ಸವ – 2023 ಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ದಸರಾದಂತೆಯೇ ಅದ್ದೂರಿಯಾಗಿ ನಡೆಸಲು ಹಾಗೂ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಕಲಾವಿದರುಗಳಿಗೆ ಆದ್ಯತೆಯ ಜೊತೆಗೆ ಜನರನ್ನ ಮನರಂಜಿಸುವ ಉದ್ದೇಶದಿಂದ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಕಲಾವಿದರುಗಳನ್ನ ಆಹ್ವಾನಿಸಲಾಗಿದೆ. ಜನವರಿ 25 ರಿಂದ ಹಂಪಿ ಉತ್ಸವ ಮುಗಿಯುವವರೆಗೂ ಹೊಸಪೇಟೆಯಲ್ಲಿದ್ದು ಕಾರ್ಯಕ್ರಮ ಸಾಂಗವಾಗಿ ನೆರವೇರುವಂತೆ ನೋಡಿಕೊಳ್ಳಲಿದ್ದೇನೆ.
– ಶಶಿಕಲಾ ಅ ಜೊಲ್ಲೆ,
ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ