https://youtu.be/NHc6OMSu0K4?si=SI_K4goOPEgwo6h2
ಕಾವ್ಯ ವಿಭಾಗ :
ಮಡದಿ
ನನ್ನ ಪ್ರೇಮದ ಮಡದಿ
ಹಳಗನ್ನಡ ಕವಿತೆಯಂತೆ
ತುಸುಗಡಸು
ಪದಗಳ ಬಿಡಿಸಿ ಅರ್ಥ
ಹೊಳೆಯಿಸುವುದು ತಾರೆಗಳಂತೆ
ಬಿಡಿ ಬಿಡಿ ಬಿಡಿಸಿದ ಒಡನೆ
ನಾಲಗೆಗೆ ದಕ್ಕುವುದು ಸವಿಗವಿತೆ
ಗಮಕ ರಸಾನುಭವ ಎದೆಯೊಳಗೆ
ಹೇಗೋ ದ್ವಿಪದಿಯಾಗಿ
ಅಲೆಮಾರಿಯಾಗಿದ್ದವ ತ್ರಿಪದಿಗಳ
ಸಂಗದಲಿ ಸುಖದೊಳಿದ್ದೆ
ಆಹಾ ಕಣ್ಣಂಚಿನ ಮಿಂಚಿಗೆ
ತುಟಿ ಚೆಲ್ಲಿದ ಸವಿ ನಗುವಿಗೆ
ಮರುಳಾಗಿ ಚತುಷ್ಪದಿಯಾದೆ
ಪ್ರಾಸಗಳ ಸಮರಸವ
ಲಯಬದ್ಧ ಮಿಡಿತಗಳ ಹಿಡಿತಗಳ
ಸುಕುಮಾರ ಕಂದಗಳ ಉತ್ತುಂಗ
ಶೃಂಗವನು ತೋರಿದವಳು
ಹಸೆಯಿಂದ ಮೇಲೆದ್ದು ಹೊಸ ಬದುಕು
ಹಸನಾಗಲೆಂದು ಎದೆಯೊಳಗೆ
ತುಡಿತವನು ಮಿಡಿತವನು ತುಂಬಿಕೊಂಡವಳು
ಸೂರ್ಯಕಾಂತಿಯ ಬಿಸುಪು
ಚಂದ್ರಕಾಂತಿಯ ತಂಪು
ಒಡಲೊಳಗೆ ತುಂಬಿಟ್ಟು
ಚೆಲುವ ಬದುಕಿನಲಿರುವ
ಪ್ರೇಮಕವಿತೆಯ ಗೀತ
ಹಾಡಿದವಳು ಕೂಡಿದವಳು
ಬದುಕ ಕುಲುಮೆಯ
ನಿಗಿ ನಿಗಿ ಕೆಂಡದಲಿ ಬೆಂದು
ಕೆಂಡಸಂಪಿಗೆಯಾಗಿ ಘಮಘಮಿಸಿ
ಸುತ್ತೆಲ್ಲ ಕಂಪು ಹರಡಿದವಳು
ಎನ್ನ ಬಡ ಬದುಕಿನಲ್ಲಿ ಸಿರಿ ಮಗಳನಿತ್ತು
ಅಪ್ಪನ ಕಣ್ಣೆದುರು ತಂದವಳು
ಷಟ್ಪದಿಯ ವಿಸ್ತಾರ ಭೂಮಿಕೆಯ
ಚೆಲುವಿನಲಿ ಹರಡಿಕೊಂಡಿತು ಅವಳ
ಪುಟ್ಟ ಬದುಕು ಗಟ್ಟಿ ಬದುಕು
ಬಾಹುಬಂಧನ ಅಂತೆ ಭಾವ ಬಂಧನದಿ
ಷಟ್ಪದಿಯ ಕಾವ್ಯದೆಲ್ಲ ಹರಹನು
ತನ್ನ ಬದುಕೊಳಗೆ ತುಂಬಿಟ್ಟು
ಎಲ್ಲ ಪ್ರಾಸಗಳನ್ನು ತ್ರಾಸವಿಲ್ಲದೆ
ಗುನುಗಿ ಕಾವ್ಯ ಸುಕುಮಾರತೆಯ
ಜೀವ ಪ್ರೀತಿಯ ಜೊತೆಗೆ ತೋರಿದವಳು
ಅಷ್ಟಪದಿ ಬಂಧವನು ದಣಿವಿಲ್ಲದೆಯೆ
ಹಾಡಿ ಎನ್ನ ಎದೆಯನು
ಮಿದುವು ಮಾಡಿದವಳು ಮಾಗಿದವಳು
ಹೊಸ ಜಗದ ಹೊಸ ಕಾವ್ಯ
ಸ್ವಚ್ಛಂದ ಬಂಧ ಬುದ್ಧಿ ಭಾವಗಳ
ದುಮ್ಮಿಕ್ಕಿ ಹರಿವ ತೊರೆ
ಅಷ್ಟಷಟ್ಪದಿ ತೆರದಿ ಅರ್ಥವಾದವಳು
ನುಣುಪು ಕುಸುರಿಯ ಕೆಲಸ
ಚಿತ್ತಾರ ಬಣ್ಣಗಳ ಬೆಡಗು
ತುಂಬಿದ ಬದುಕ ಕಾವ್ಯ ತಂದವಳು
ಭವದ ಭಾವಗಳೆಲ್ಲ ಪ್ರೇಮ ಗೀತಗಳಾಗಿ
ಎನ್ನ ಪೊರೆಯುವ ಪ್ರೇಮ ಮೂರ್ತಿಯಾದವಳು.
ಬಿ.ಎಂ.ರಾಜಶೇಖರ, ಹೊಸಪೇಟೆ
ಮೊ:9900705323
More Stories
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಕಲಾವಿದರಿಗೆ ಗುರುತಿನ ಚೀಟಿ ನೋಂದಣಿ ಪ್ರಾರಂಭ
ನಾ- ಸತ್ತಿಲ್ಲ ನಾಟಕ ಪ್ರದರ್ಶನ, ರಂಗ ಕಲೆಗೆ ಸಾವಿಲ್ಲ, ಕಲೆಗೆ ಜೀವ ತುಂಬಿದ ಕಲಾವಿದರು