December 5, 2024

Hampi times

Kannada News Portal from Vijayanagara

ಸಂಕ್ರಾಂತಿಯಲ್ಲಿ ಅಡಗಿದೆ ವೈಜ್ಞಾನಿಕ ಮಹತ್ವ: ಬಿಎಂ ರಾಜಶೇಖರ

 

https://youtu.be/NHc6OMSu0K4?si=SI_K4goOPEgwo6h2

ಸಹಬಾಳ್ವೆಯ ಸಂಕ್ರಾಂತಿ

• ಬಿ.ಎಂ.ರಾಜಶೇಖರ, ಹೊಸಪೇಟೆ

ಭಾರತವು ಹಬ್ಬಗಳ ದೇಶ. ಇಲ್ಲಿರುವುಷ್ಟು ವೈವಿಧ್ಯಮಯವಾದ ಹಬ್ಬಗಳು ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಇದ್ದಂತಿಲ್ಲ. ಎಲ್ಲ ಋತುಗಳಲ್ಲಿಯೂ ಹಬ್ಬ, ಉತ್ಸವಗಳು ದೇಶದಾದ್ಯಂತ ಒಂದಿಲ್ಲೊಂದು ಭಾಗದಲ್ಲಿ ನಿರಂತರವಾಗಿ ನಡೆದೇ ಇರುತ್ತವೆ. ಭಾರತೀಯರ ಭಾವವಲಯದ ಆಳದಲ್ಲೆಲ್ಲೋ ಇದು ಸುಪ್ತವಾಗಿ ನೆಲೆ ನಿಂತಿರುತ್ತದೆ. ಹಾಗಾಗಿ ಹಬ್ಬಗಳು ನಮ್ಮ ಜನಜೀವನದ ಅವಿಭಾಜ್ಯ ಅಂಗವಾಗಿವೆ. ಸಮುದಾಯಗಳ ಮನೋಭಿಲಾಶೆಯಂತೆ ವರ್ಣರಂಜಿತವಾಗಿ ಇವುಗಳು ಮೂರ್ತರೂಪಕ್ಕೆ ಆವಿರ್ಭವಿಸುತ್ತವೆ. ಬಹುತೇಕ ಹಬ್ಬಗಳಿಗೆ ಧಾರ್ಮಿಕ ಆಚರಣೆ ನಂಬಿಕೆಗಳೇ ಕಾರಣವಾಗಿದ್ದರೂ, ಪ್ರಕೃತಿಯ ವಿಸ್ಮಯಗಳು, ಬದಲಾವಣೆಗಳು, ಅದ್ಭುತಗಳೂ ಇವುಗಳಿಗೆ ಮೂಲ ಭಿತ್ತಿಯಾಗಿರುವುದೂ ಉಂಟು.

ಪುರಾಣದ ಕಥೆಗಳು, ಧಾರ್ಮಿಕ ನಂಬಿಕೆಗಳಂತೆಯೇ ಪ್ರಕೃತಿಯಲ್ಲಾಗುವ ಬದಲಾವಣೆಗಳು ಮಾನವನ ಕುತೂಹಲವನ್ನು ಕೆರಳಿಸಿದವು, ಅರಳಿಸಿದವು. ಹಾಗಾಗಿ ಅನೇಕ ಹಬ್ಬಗಳಿಗೆ ಪ್ರಕೃತಿಯೂ ಕಾರಣವಾಯಿತು. ಪ್ರಕೃತಿಗೆ, ಭೂತಾಯಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿಯೇ ಹಬ್ಬಗಳನ್ನು ಆಚರಿಸುವುದೂ ಉಂಟು. ಆದರೆ ಕಾಲಕ್ರಮೇಣ ಇವುಗಳಿಗೆ ಧಾರ್ಮಿಕ ಪರಿವೇಷ ಆವರಿಸಿತು. ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಸಂಕ್ರಾಂತಿ ಹಬ್ಬದಲ್ಲಿ ಎಲ್ಲವೂ ಮಿಳಿತವಾಗಿದೆ. ಪ್ರಕೃತಿಗೆ, ಭೂತಾಯಿಗೆ ಕೃತಜ್ಞತೆಯಿಂದ ನಮಸ್ಕರಿಸುವ ಧನ್ಯತೆ, ಪುರಾಣದ ಕಥೆಗಳು, ಪ್ರಕೃತಿಯ ಬದಲಾವಣೆಗಳು ಇವೆಲ್ಲವೂ ಹದವಾಗಿ ಬೆರೆತಿವೆ. ಮಹಾಭಾರತದಲ್ಲಿನ ಧೀರೋದಾತ್ತ ಮಹಾಪುರುಷ ಭೀಷ್ಮನ ಅಂತ್ಯ ಸಂಕ್ರಾಂತಿಯಂದೇ ಆಗುತ್ತದೆ. ಯುದ್ಧದಲ್ಲಿ ನಿಶ್ಯಸ್ತ್ರವಾಗಿ ಶರಶಯ್ಯೆಯಲ್ಲಿ ಮಲಗಿದ ಭೀಷ್ಮ ಇಚ್ಛಾಮರಣಿ ಆಗಿದ್ದ ದೈವೀಪುರುಷ. ತನ್ನ ಮರಣದ ದಿನ ಉತ್ತರಾಯಣ ಪುಣ್ಯದಿನದಂದೇ ಆಗಬೇಕೆಂದು ತೀರ್ಮಾನ ಮಾಡಿದ್ದನು. ಏಕೆಂದರೆ ನಮ್ಮ ನಂಬಿಕೆಯ ಪ್ರಕಾರ ಆ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಹಾಗಾಗಿ ಅಲ್ಲಿಯವರೆಗೆ ನೆಪ ಮಾತ್ರಕ್ಕೆ ಜೀವ ಹಿಡಿದುಕೊಂಡಿದ್ದು ಅಂದು ತನ್ನ ದೇಹತ್ಯಾಗ ಮಾಡಿ ಸ್ವರ್ಗಾರೋಹಣ ಮಾಡುತ್ತಾನೆ. ಈ ನಂಬಿಕೆ ಮಹಾಭಾರತದ ಕಾಲಕ್ಕಾಗಲೇ ನಮ್ಮ ಜನಸಮುದಾಯದಲ್ಲಿ ಬೆರೆತು ಹೋಗಿತ್ತು. ಭೀಷ್ಮನ ಪ್ರಸಂಗ ಹಾಗೂ ವ್ಯಾಸ ಮಹರ್ಷಿಗಳ ಮಹಾಭಾರತದಿಂದ ಇದು ದೇಶದಲ್ಲೆಡೆ ಹರಡಿಕೊಂಡಿತು. ಭಾರತೀಯರ ಧಾರ್ಮಿಕ ಮನಸ್ಸು ಇದನ್ನು ತನ್ನದಾಗಿಸಿಕೊಂಡಿತು.

 

ಭೂಮಿ, ಚಂದ್ರ, ಸೂರ್ಯ ಇತ್ಯಾದಿ ಆಕಾಶ ಕಾಯಗಳ ಚಲನೆಗಳ ಅರಿವಿದ್ದ ಭಾರತೀಯ ಋಷಿಗಳು ಈ ದಿನದ ಮಹತ್ವವನ್ನು ಕರಾರುವಕ್ಕಾಗಿ ಗುರುತಿಸಿದ್ದರು. ಸಂಕ್ರಾಂತಿಯ ದಿನದಿಂದ ಸೂರ್ಯನು ಉತ್ತರಾಯಣದ ಪಥದಲ್ಲಿ ಮುನ್ನಡೆಯುತ್ತಾನೆ ಎಂಬ ವೈಜ್ಞಾನಿಕ ಸತ್ಯವನ್ನು ತೆರೆದಿಟ್ಟರು. ಇದರಿಂದ ಭೂಮಿಯ ಉತ್ತರಾರ್ಧಗೋಳಕ್ಕೆ ದಿನದಿನವೂ ಬಿಸಿಲು, ಬೆಳಕು ಹೆಚ್ಚಾಗುತ್ತದೆ. ಅಂತೆಯೇ ದಕ್ಷಿಣಾರ್ಧ ಗೋಳದಲ್ಲಿ ಚಳಿ ಹೆಚ್ಚುತ್ತಾ ಹೋಗುತ್ತದೆ. ವಿಶೇಷವಾಗಿ ಭಾರತದ ವಾಯುಗುಣದ ಮೇಲೆ ಇದು ಪ್ರಭಾವ ಬೀರುತ್ತದೆ. ಭಾರತದ ವಾಯುಗುಣ ಹಾಗೂ ಬೇಸಾಯದ ಮೇಲೆ ಇದು ಪರಿಣಾಮಕಾರೀ ಪ್ರಭಾವವನ್ನು ಬೀರುತ್ತದೆ. ಇದರಿಂದ ಇಲ್ಲಿ ಬೇಳೆಕಾಳುಗಳು, ಹತ್ತಿ, ಸೂರ್ಯಕಾಂತಿ ಹೀಗೆ ಬಿಸಿಲನ್ನು ಹೆಚ್ಚಾಗಿ ಬೇಡುವ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಮಕರ ವೃತ್ತದಿಂದ ಕರ್ಕ ವೃತ್ತದ ಕಡೆಗೆ ಅಯನವನ್ನು ಪ್ರಾರಂಭಿಸುವ ಸೂರ್ಯನನ್ನು ಈ ದಿನ ಆರಾಧಿಸುತ್ತಾರೆ. ವಾಸ್ತವವಾಗಿ ಇದೇ ಸಂಕ್ರಾಂತಿ ಹಬ್ಬಕ್ಕೆ ಮೂಲ ಕಾರಣ ಎಂದು ಭಾವಿಸಬಹುದು.


ಈಗಲೂ ಭಾರತದಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾಗಿ ರೈತರಿಗೆ ಸಂಕ್ರಾಂತಿ ಒಂದು ವಿಶೇಷ ಹಬ್ಬವಾಗಿದೆ. ಸಂಕ್ರಾಂತಿಯ ವೇಳೆಗೆ ಮಳೆ ಆಶ್ರಿತ ಜಮೀನುಗಳಲ್ಲಿ ಸುಗ್ಗಿ ಮುಗಿದು ಕೈಯಲ್ಲಿ ಹಣ ಸೇರಿರುತ್ತದೆ. ದನಗಳು ಅದರಲ್ಲೂ ಎತ್ತುಗಳಿಗೆ ತುಸು ವಿಶ್ರಾಂತಿ ದೊರೆತಿರುತ್ತದೆ. ರೈತರಿಗೆ ತನ್ನ ದೈವೀ ಸ್ವರೂಪದ ಎತ್ತು, ಹಸುಗಳಿಗೆ, ಭೂತಾಯಿಗೆ ಭಕ್ತಿಯಿಂದ ಕೃತಜ್ಞತೆ ಅರ್ಪಿಸುವ ದಿನವಾಗಿ ಸಂಭವಿಸುತ್ತದೆ. ಹಾಗಾಗಿ ಎತ್ತುಗಳನ್ನು ಮನದಣಿಯೆ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ. ನಾಡಿನ ಕೆಲವೆಡೆ ಊರಿನ ಮಧ್ಯದಲ್ಲಿ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಎತ್ತುಗಳನ್ನು ಓಡಿಸಿಕೊಂಡು ಬಂದು ಜಿಗಿಸುತ್ತಾರೆ. ಜೋಡಿ ಎತ್ತುಗಳ ಮೆರವಣಿಗೆಯನ್ನೂ ಮಾಡುತ್ತಾರೆ. ವ್ಯವಸಾಯಕ್ಕೂ ಪಶುಪಾಲನೆಗೂ ಬಿಡದ ನಂಟು. ಪಶುಗಳಿಲ್ಲದೇ ವ್ಯವಸಾಯ ಮಾಡಲು ಸಾಧ್ಯವೇ ಇಲ್ಲದಂತಹ ಕಾಲ ಇತ್ತೀಚಿನವರೆಗೂ ಇತ್ತು. ಭೂತಾಯಿಗೆ ನೀಡುವ ಗೌರವವನ್ನೇ ದನಕರುಗಳಿಗೂ ನೀಡುತ್ತಿದ್ದರು, ನೀಡುತ್ತಿದ್ದಾರೆ. ಇಂತಹದೇ ಕಾರಣಗಳಿಂದ ಶಿವನಿಗೆ ಪಶುಪತಿ ಎಂದೇ ಕರೆದರು. ಸಿಂಧೂ ಸಂಸ್ಕೃತಿಯ ಉತ್ಖನನದಲ್ಲಿ ದೊರೆತಿರುವ ಯೋಗಾರೂಢ ಆಕೃತಿಯನ್ನು ಪಶುಪತಿ ಎಂದೇ ಕರೆದಿದ್ದಾರೆ. ಪಶು ಸಂಪತ್ತು ದೊಡ್ಡ ಸಂಪತ್ತು ಎಂಬ ಕಾಲ ಈಗ ಬಹುತೇಕ ಇಲ್ಲವಾಗಿದೆ.

 

ಹಳ್ಳಿಗಳಲ್ಲಿ ಈಗಲೂ ಸಂಕ್ರಾಂತಿಯ ದಿನದಂದು ಭೂತಾಯಿಗೆ ನೇರವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುವ ಪದ್ಧತಿ ಇದೆ. ಹೊಸ ಮಣ್ಣಿನ ಮಡಿಕೆಯಲ್ಲಿ ಧಾನ್ಯಗಳನ್ನು ಹಾಕಿ ಬೇಯಿಸಿ ‘ಚರಗ’ ಎನ್ನುವ ಹೆಸರಿನ ಒಂದು ಬಗೆಯ ಗಂಜಿಯನ್ನು ತಯಾರಿಸುತ್ತಾರೆ. ಮನೆಮಂದಿಯೆಲ್ಲಾ ಹಬ್ಬದಡಿಗೆಯ ಸಹಿತ ತಮ್ಮ ಹೊಲಗಳಿಗೆ ತೆರಳಿ, ಭೂಮಿಗೆ ಪೂಜೆ ಸಲ್ಲಿಸಿ, ಈ ಚರಗವನ್ನು ಹೊಲದ ತುಂಬೆಲ್ಲ ಸಿಂಪಡಿಸಿ ನೈವೇದ್ಯ ಅರ್ಪಿಸುತ್ತಾರೆ. ತಮಗೆ ಎಲ್ಲಾ ಬಗೆಯ ಧಾನ್ಯಗಳನ್ನು ಒದಗಿಸುವ ಭೂತಾಯಿಗೆ ಭಕ್ತಿಯಿಂದ ನಮಿಸುವ ಬಗೆಯಿದು. ಇದು ಈಗಲೂ ನಡೆದಿದೆ. ಇದೆಲ್ಲವೂ ಸಂಕ್ರಾಂತಿಯ ಸೊಗಸನ್ನು, ಚೆಲುವನ್ನು ಹೆಚ್ಚಿಸಿದೆ.

ನಮ್ಮಲ್ಲಿ ಹಬ್ಬಗಳ ಅಡುಗೆಯ ವೈವಿಧ್ಯವು ಕುತೂಹಲ ಉಂಟು ಮಾಡುತ್ತದೆ. ಒಂದೊಂದು ಹಬ್ಬಕ್ಕೆ ಒಂದೊಂದು ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಈ ಹಿಂದಿನ ಕಾಲದಲ್ಲಿ ಬಹುತೇಕ ಅವುಗಳನ್ನು ಮತ್ತೆಂದೂ ಮಾಡುತ್ತಿರಲಿಲ್ಲ. ಉದಾಹರಣೆಗೆ ಯುಗಾದಿಗೆ ಬೇವು-ಬೆಲ್ಲ, ನಾಗರಪಂಚಮಿಗೆ ಉಂಡೆಗಳು, ರಾಮನವಮಿಗೆ ಪಾನಕ, ಕೋಸಂಬರಿ, ಪಾಯಸ, ಗೌರಿ ಹುಣ್ಣಿಮೆಗೆ ಸಕ್ಕರೆ ಆರತಿಗಳು, ಗಣಪತಿ ಹಬ್ಬಕ್ಕೆ ಮೋದಕ, ಕಡುಬುಗಳು, ಅನಂತನ ಹುಣ್ಣಿಮೆಯಂದು ಆಚರಿಸುವ ಜೋಕುಮಾರಸ್ವಾಮಿಯ ಹಬ್ಬದಂದು ‘ಮಿದಿಕಿ’ ಎನ್ನುವ ಸಜ್ಜೆಯ ಹಿಟ್ಟು ಬೆಲ್ಲ ಹಾಕಿ ಮಾಡುವ ರುಚಿಕರ ಖಾದ್ಯ. ಹಾಗೆಯೇ ಸಂಕ್ರಾಂತಿಯಂದು ಎಳ್ಳು ಹೋಳಿಗೆಗಳು, ಶೇಂಗಾ ಹೋಳಿಗೆಗಳ ವಿಶೇಷ ಅಡುಗೆ ಮಾಡುತ್ತಾರೆ. ಇವೆಲ್ಲವೂ ನಮ್ಮ ವೈವಿಧ್ಯತೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಭಾರತದ ಅಡುಗೆಗಳ ವೈವಿಧ್ಯತೆ ಬೆರಗು ಮೂಡಿಸುತ್ತದೆ.

 

ಸಂಕ್ರಾಂತಿಯಂದು ಸಾಮಾಜಿಕ ಸಹಬಾಳ್ವೆಯ ಸಂಕೇತವಾಗಿ ಎಳ್ಳು, ಬೆಲ್ಲ, ಶೇಂಗಾ, ಕೊಬ್ಬರಿಗಳ ಮಿಶ್ರಣವನ್ನು ಬಂಧುಗಳಿಗೆ, ಗೆಳೆಯರಿಗೆ, ಪರಿಚಿತರೆಲ್ಲರಿಗೂ ನೀಡಿ ಪರಸ್ಪರ ಶುಭ ಹಾರೈಸುವ ಅಪೂರ್ವ ಭಾವ ಶ್ರೀಮಂತಿಕೆ ಕಾಣುತ್ತದೆ. ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆಯ ಮಾತನಾಡಿ’ ಎಂದು ಹೇಳುತ್ತಾ ಪರಸ್ಪರ ಮನದ ಮೈಲಿಗೆಗಳನ್ನು ತೊಡೆದು ಹಾಕಿ, ಸ್ನೇಹ ಪ್ರೀತಿಗಳನ್ನು ಪುನಃ ನವೀಕರಿಸಿಕೊಳ್ಳುವ ಅದ್ಭುತ ವಿಧಾನ ಈ ಹಬ್ಬದಲ್ಲಿ ಅಡಗಿದೆ. ನಮ್ಮ ಭಾರತೀಯ ಹಬ್ಬಗಳು ಸಹಬಾಳ್ವೆಯ ಪಾಠವನ್ನು ನಮಗೆ ಕಲಿಸುತ್ತವೆ. ನಾವು ಕಲಿಯಲು ಸಿದ್ಧರಿರಬೇಕಷ್ಟೇ.

 

 

ಜಾಹೀರಾತು
error: Content is protected !!