July 17, 2025

Hampi times

Kannada News Portal from Vijayanagara

ಜ.27ರಂದು  ಹಂಪಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ: ಸಚಿವೆ ಶಶಿಕಲಾ ಜೊಲ್ಲೆ

https://youtu.be/NHc6OMSu0K4?si=SI_K4goOPEgwo6h2

 

ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಜಯನಗರ ಜಿಲ್ಲಾಡಳಿತದ ಜೊತೆ ಸಭೆ |  ಹಂಪಿ ಉತ್ಸವದ ಸಿದ್ದತೆಗಳ ಬಗ್ಗೆ ಮಾಹಿತಿ | ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ

HAMPI TIMES

ಬೆಳಗಾವಿ ಸುವರ್ಣವಿಧಾನಸೌಧ :  ಜನವರಿ 27 ರಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾನ್ಯ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಸಂಸ್ಥೆಗಳ ಸಚಿವೆ  ಶಶಿಕಲಾ ಅ ಜೊಲ್ಲೆ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿ, ಹಂಪಿ ಉತ್ಸವದ ಸಿದ್ದತೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಕೋವಿಡ್‌ ನಂತರ ಹಾಗೂ ವಿಜಯನಗರ ಜಿಲ್ಲೆ ಹೊಸದಾಗಿ ನಿರ್ಮಾಣವಾದ ನಂತರ ನಡೆಸುತ್ತಿರುವ ಉತ್ಸವ ಇದಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಅದ್ದೂರಿಯಾಗಿ ಉತ್ಸವ ಆಚರಣೆಗೆ ಸೂಚನೆ ನೀಡಲಾಗಿತ್ತು. ಇದಕ್ಕೆ ಅಗತ್ಯ ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಮುಖ್ಯಮಂತ್ರಿಗಳಿಂದ ಉದ್ಘಾಟನೆ:
ಕಳೆದ ಬಾರಿ ವಿಜಯನಗರ ಜಿಲ್ಲೆಯಲ್ಲಿ ನಡೆಸಿದ ಸಭೆಯಲ್ಲಿ ಜನವರಿ 27, 28 ಮತ್ತು 29 ರಂದು ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜನವರಿ 27 ರಂದು ಉದ್ಘಾಟನೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ವಸಂತ ವೈಭವ, ತುಂಗಾರತಿ, ಧ್ವನಿ ಬೆಳಕು:
ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾತಂಡಗಳಿಂದ ಹೊಸಪೇಟೆ ನಗರದಲ್ಲಿ ವಸಂತವೈಭವ ಮೆರವಣಿಗೆ ಕಾರ್ಯಕ್ರಮ, ತುಂಗಾನದಿಯ ತಟದಲ್ಲಿ ತುಂಗಾರತಿ, ವಿಜಯನಗರ ವೈಭವದ ಕುರಿತು ಸುಮಾರು 300 ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಹಂಪಿ ಬೈ ಸ್ಕೈ, ವಿಭಿನ್ನ ರೀತಿಯ ಫಲಪುಷ್ಪ ಪ್ರದರ್ಶನ, ಅಶ್ವದಳ ಪ್ರದರ್ಶನ, ಕುಸ್ತಿ ಹಾಗೂ ಇತರೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು.

ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆಗೆ ಸೂಚನೆ:
ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಸುಮಾರು 1036 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗಿದ್ದು ಇದುವರೆಗೂ ಅವಕಾಶ ಸಿಗದ ಸ್ಥಳೀಯ ಕಲಾವಿದರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಕಾನೂನು ಸುವ್ಯವಸ್ಥೆಗೆ ಅಗತ್ಯ ತಯಾರಿ:
ಲಕ್ಷಾಂತರ ಜನರು ಸೇರುವ ಈ ಉತ್ಸವದಲ್ಲಿ ಅಗತ್ಯ ಕಾನೂನು ಸುವ್ಯವಸ್ಥೆಗೆ ವ್ಯವಸ್ಥೆ ಮಾಡಬೇಕು. ಹಂಪಿ ಪ್ರದೇಶದಲ್ಲಿ ಸಂಪೂರ್ಣ ಸಿ.ಸಿ ಟಿವಿಗಳನ್ನು ಅಳವಡಿಸಬೇಕು. ಹಂಪಿಗೆ ಹೋಗುವ ಮಾರ್ಗವಾದ ಕಡ್ಡಿರಾಂಪುರ ಸ್ವಾಗತ ಕಮಾನಿನಿಂದ ಕಡ್ಡಿರಾಂಪೂರ, ಕೃಷ್ಣಾ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಮಾರ್ಗದ ಮೂಲಕ ಕಮಲಾಪುರದವರೆಗೆ ಏಕಮುಖ ಮಾರ್ಗ ಸಂಚಾರ ವ್ಯವಸ್ಥೆ ಮಾಡುವುದು. ಹಂಪಿ ಪ್ರದೇಶದಲ್ಲಿ ಅವಶ್ಯವಿದ್ದ ಕಡೆಗಳಲ್ಲಿ ಶಾಶ್ವತವಾಗಿ ಸಂಚಾರ ಸಂಕೇತಗಳನ್ನು ಅಳವಡಿಸುವುದು. ಸುವ್ಯವಸ್ಥಿತ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ದಸರಾ ಮಾದರಿಯ ದೀಪಾಲಂಕಾರ:
ದಸರಾ ಮಾದರಿಯಲ್ಲಿ ಹಂಪಿ ಹಾಗೂ ಹೊಸಪೇಟೆಯಲ್ಲಿ ದೀಪದ ಆಲಂಕಾರ ಮಾಡುವ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಲಾಯಿತು. ಹೊಸದಾಗಿ ದೀಪಾಲಂಕಾರ ಸಮಿತಿಯನ್ನು ರಚನೆ ಮಾಡಲಾಗಿದ್ದು ಸದರಿ ಸಮಿತಿಯ ಸದಸ್ಯರು ಹೊಸಪೇಟೆ, ಕಮಲಾಪುರ, ಹಂಪಿ ಈ ಮೂರು ಸ್ಥಳಗಳ ಮುಖ್ಯ ರಸ್ತೆಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ಪ್ಲಾನ್‌ ತಯಾರಿಸಿ ಪ್ರಸ್ತುತ ಪಡಿಸಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ವೆಂಕಟೇಶ್‌ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಜಾಹೀರಾತು
error: Content is protected !!