June 14, 2025

Hampi times

Kannada News Portal from Vijayanagara

ಆಶಾ ಕಾರ್ಯಕರ್ತರ ಗೌರವಧನ 12 ಸಾವಿರಕ್ಕೆ ಹೆಚ್ಚಿಸಿ: ಡಾ.ಪ್ರಮೋದ್

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹೊಸಪೆಟೆ:
ಆರೋಗ್ಯ ಇಲಾಖೆಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಹಗಲಿರಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆರ್‌ಸಿಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹ ಧನ ನೀಡುವುದನ್ನು ರದ್ದುಪಡಿಸಿ, ಮಾಸಿಕ 12 ಸಾವಿರ ರೂ.ಗೌರವಧನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಆಶಾಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಮೋದ್.ಎನ್ ಮಾತನಾಡಿ, 13 ವರ್ಷಗಳಿಂದ ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಸಚಿವರು, ಇಲಾಖೆಯ ರಾಜ್ಯ ಅಧಿಕಾರಿಗಳೊಂದಿಗೆ 5 ಸಭೆಗಳು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಜಾರಿಗೆ ಬರುತ್ತಿಲ್ಲ. ಆರೋಗ್ಯ ಸಚಿವರ ಹುಸಿ ಭರವಸೆಗಳು ಕಾರ್ಯಕರ್ತರ ತಾಳ್ಮೆ ಮೀರಿಸಿವೆ. ಚಳಿಗಾಲದ ಅಧಿವೇಶನದಲ್ಲಿ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಮುಖಂಡರಾದ ಎ.ಶಾಂತಾ ಮಾತನಾಡಿ, ಜೀವಪಣಕ್ಕಿಟ್ಟು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಕೂಡಲೇ ಸಭೆ ನಡೆಸಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  ಸಂಘದ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಮುಖಂಡರಾದ ನೇತ್ರಾವತಿ, ವೀರಮ್ಮ, ಮಹೇಶ್ವರಿ, ಚೆನ್ನಮ್ಮ, ನಾಗಮ್ಮ, ವಿಜಯಲಕ್ಷ್ಮಿ, ಅನ್ನಪೂರ್ಣ ಸೇರಿದಂತೆ ಆಶಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಜಾಹೀರಾತು
error: Content is protected !!