December 5, 2024

Hampi times

Kannada News Portal from Vijayanagara

4 ಕೋಟಿ ರೂ.ನಲ್ಲಿ ರಾಜ್ಯದಲ್ಲಿಯೇ ಬಹುದೊಡ್ಡ ಕಲ್ಯಾಣಮಟಂಪ ನಿರ್ಮಾಣ : ಸಚಿವ ಶ್ರೀರಾಮುಲು

 

https://youtu.be/NHc6OMSu0K4?si=SI_K4goOPEgwo6h2

ರೂ.4ಕೋಟಿ ವೆಚ್ಚದಲ್ಲಿ ಕಲ್ಯಾಣ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ
ಹಂಪಿಟೈಮ್ಸ್ ಬಳ್ಳಾರಿ:
ಸಾರಿಗೆ ಇಲಾಖೆ ವತಿಯಿಂದ 4ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಕಲ್ಯಾಣ ಕೇಂದ್ರವು ಇಡೀ ರಾಜ್ಯದಲ್ಲಿಯೇ ಅತಿದೊಡ್ಡ ಕಲ್ಯಾಣ ಮಂಟಪವಾಗಲಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ಕಚೇರಿ ಹಿಂಭಾಗದ 2ನೇ ಹಳೇ ಬಸ್ ಘಟಕದಲ್ಲಿ ಶನಿವಾರ ನೂತನ ಕಾರ್ಮಿಕ ಕಲ್ಯಾಣ ಕೇಂದ್ರದ ನಿರ್ಮಾಣಕ್ಕೆ ಶಂಕುಸ್ಥಾಪನಾ ಅಡಿಗಲ್ಲು ಹಾಗೂ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವು ರಚನೆಯಾಗಿದ್ದು, ಸಾರಿಗೆ ನಿಗಮವು 6ನೇ ವೇತನದಲ್ಲಿದ್ದು, ನಿಗಮದ ನೌಕರರಿಗೆ 7ನೇ ವೇತನಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಕಾರ್ಮಿಕ ಕಲ್ಯಾಣ ಕೇಂದ್ರದ ವಿಶೇಷತೆ: ಸುಮಾರು 1 ಎಕರೆ ಪ್ರದೇಶದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಕೇಂದ್ರವು ನಿರ್ಮಾಣವಾಗಲಿದೆ. ನೆಲಮಹಡಿ 1306 ಚ.ಮೀ, ಮೊದಲ ಮಹಡಿ 1246 ಚ.ಮೀ ಸೇರಿದಂತೆ ಒಟ್ಟು ವಿಸ್ತೀರ್ಣ 2553 ಚ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ನೆಲ ಅಂತಸ್ತಿನಲ್ಲಿ 04 ಸುಸಜ್ಜಿತ ಕೊಠಡಿಗಳು, ವಿಶಾಲವಾದ ಊಟದ ಪ್ರಾಂಗಣ, ವಿಶಾಲವಾದ ಅಡುಗೆ ಕೋಣೆ, ಶೌಚಾಲಯ ಮತ್ತು ಮೊದಲನ ಅಂತಸ್ತಿನಲ್ಲಿ ವಿಶಾಲವಾದ ಪ್ರಾಂಗಣ (1000 ಜನರಿಗೆ) 02 ಕೊಣೆಗಳು (ವರ ಹಾಗೂ ವಧುವಿಗೆ), ಮೊದಲನ ಅಂತಸ್ತಿಗೆ ನೇರವಾಗಿ ಹೋಗಲು ಮುಂಭಾಗ ಹಾಗೂ ಹಿಂಭಾಗದಿಂದ ಹೋಗಲು ವಿಶಾಲವಾದ ಮೆಟ್ಟಲು ಇರಲಿವೆ.
ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿದ ಚಾಲನಾ ಸಿಬ್ಬಂದಿಗಳಿಗೆ ಹಾಗೂ ನಿಗಮದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ಕಲ್ಪನ, ಕಲಬುರಗಿಯ ಕಕರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮುಖ್ಯ ಕಾಮಗಾರಿ ಇಂಜಿನಿಯರ್ ಮೆಹಬೂಬ ಸಾಹೇಬ ಎ.ದೇವೂರು, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ.ಡಿ.ಎಂ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!