https://youtu.be/NHc6OMSu0K4?si=SI_K4goOPEgwo6h2
ಹಂಪಿ ಪ್ರವಾಸಿಗರಿಗಿಲ್ಲ ಮೂಲಭೂತ ಸೌಲಭ್ಯ | ಕುಡಿಯುವ ನೀರಿಗೂ ಪರದಾಟ | ಸೋಲಾರ್ ಛಾವಣಿ ಕಣ್ಮರೆ!
- ಬಸಾಪುರ ಬಸವರಾಜ
HAMPI TIMES
ಹೊಸಪೇಟೆ: ಹಂಪಿ ಅಭಿವೃದ್ಧಿ ಹೊಣೆ ಹೊತ್ತ ಇಲಾಖೆಗಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರು, ಭಕ್ತಾಧಿಗಳು ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಗಾಗಿ ಇಂದಿಗೂ ಪರದಾಡುತ್ತಿದ್ದಾರೆ.
ಕಣ್ಣಿದ್ದರೆ ಕನಕಗಿರಿ ನೋಡು, ಕಾಲಿದ್ದರೆ ಹಂಪಿ ನೋಡು ಎಂಬ ನಾಣ್ಣುಡಿ ಹಂಪಿ ನೆಲದಲ್ಲಿ ಓಡಾಡುವಾಗ ನೆನಪಿಗೆ ಬಾರದೆ ಇರದು. ವಿಶ್ವಪರಂಪರೆ ತಾಣ ಹಾಗೂ ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಹಂಪಿಯನ್ನು ಕಾಲ್ನಡಿಗೆಯಲ್ಲೆ ಸುತ್ತಿ ನೋಡಿದಾಗಲೇ ಪ್ರಕೃತಿಯ ಸೊಬಗು ಕಣ್ತುಂಬಿಕೋಳ್ಳಲು ಸಾಧ್ಯ. ಪ್ರವಾಸಿಗರು ನಿತ್ಯವೂ ಹಂಪಿ ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ದರ್ಶನ ಪಡೆದು, ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ, ಅಚ್ಯತರಾಯಪುರ, ಪುರಂದರದಾಸರ ಮಂಟಪ ಮಾರ್ಗವಾಗಿ ವಿಜಯವಿಠಲ ದೇಗುಲಗಳ ಸ್ಮಾರಕಗಳ ವೀಕ್ಷಣೆಗಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಪ್ರವಾಸಿಗರು ದಾಹ ತಣಿಸಿಕೊಳ್ಳಲು ಮಾರ್ಗದುದ್ದಕ್ಕೂ ಕುಡಿಯುವ ನೀರಿಗಾಗಿ, ದೈಹಿಕ ಒತ್ತಡ ತಗ್ಗಿಸಿಕೊಳ್ಳಲು ಶೌಚಾಲಯಗಳ ಹುಡುಕಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಶ್ರೀಕೋದಂಡರಾಮಸ್ವಾಮಿ ದೇವಸ್ಥಾನದ ಬಳಿ ತಾತ್ಕಾಲಿಕಾಗಿ ಅಳವಡಿಸಿರುವ ಎರಡು ಹೈಟೆಕ್ ಶೌಚಾಲಯಗಳು ಪ್ರಭಾವಿಗಳ ಬಳಕೆಗೆ ಸೀಮಿತಗೊಂಡಿದ್ದು, ಅವರ ಬಳಕೆ ನಂತರ ಅವುಗಳಿಗೆ ಬೀಗ ಜಡಿಯಲಾಗುತ್ತದೆ. ಲಕ್ಷಾಂತರ ರೂ.ಖರ್ಚಿನಲ್ಲಿ ನಿರ್ಮಿಸಲಾದ ಹೈಟೆಕ್ ಶೌಚಾಗೃಹ ಇದ್ದು ಉಪಯೋಗವಿಲ್ಲದಂತಾಗಿವೆ. ಸಾರ್ವಜನಿಕರಿಗಾಗಿ ಕನಿಷ್ಠ ಸೌಲಭ್ಯ ಕಲ್ಪಿಸದ ಆಡಳಿತ ವ್ಯವಸ್ಥೆ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರವಾಸಿಗರ ಅಳಲು ಕೇಳುವವರಿಲ್ಲದಂತಾಗಿದೆ. ಕಾಲ್ನಡಿಗೆಯಲ್ಲಿ ಹೋಗುವ ಬಾಲಕೀಯರು, ಯುವತಿಯರು, ಮಹಿಳೆಯರು, ವೃದ್ಧರು ಬಯಲಲ್ಲೆ ಶೌಚಕ್ಕೆ ತೆರಳಬೇಕೇ? ಸಕ್ಕರೆ ಕಾಯಿಲೆ ಸೇರಿದಂತೆ ನಾನಾ ಬಾಧೆಗಳಿಂದ ಬಳಲುತ್ತಿರುವ ಪ್ರವಾಸಿಗರ ಆರೋಗ್ಯ ಸ್ಥಿತಿ ಬಗ್ಗೆ ಕನಿಷ್ಠ ಕಾಳಜಿಯೂ ತೋರುತ್ತಿಲ್ಲವೆಂದು ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಪ್ರವಾಸಿಗರು.
ಕಣ್ತೆರೆಯದ ಸೋಲಾರ್ ದೀಪಗಳು: ತೆಪ್ಪೋತ್ಸವ ಮತ್ತು ಫಲಪೂಜಾ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿವೇಳೆಯೆ ನಡೆಯುತ್ತವೆ. ಫಲಪೂಜಾ ಮಹೋತ್ಸವದಂದು ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಚಕ್ರತೀರ್ಥದ ಬಳಿ ಇರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದವರೆಗೆ ಉತ್ಸವ ಮೂರ್ತಿಗಳನ್ನು ರಾತ್ರಿವೇಳೆ ಮಂಗಳವಾದ್ಯ ಮೆರವಣಿಗೆ ಮೂಲಕ ತೆರಳಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ನಂತರ ಉತ್ಸವ ಮೂರ್ತಿಯೊಂದಿಗೆ ದೇಗುಲಕ್ಕೆ ಮರಳುತ್ತಾರೆ. ಫಲಪೂಜಾ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ತೆರಳುವ ಮಾರ್ಗದುದ್ದಕ್ಕೂ ಈಗಾಗಲೇ ಕೊಟ್ಯಾಂತರ ವೆಚ್ಚದಲ್ಲಿ ಅಳವಡಸಿಲಾಗಿರುವ ಸೋಲಾರ್ ದೀಪಗಳು ಬೆಳಕು ಚೆಲ್ಲದಂತಾಗಿವೆ. ಕಂಬಗಳಿಗೆ ಅಳವಡಿಸಿದ್ದ ಸೋಲಾರ್ ಛಾವಣಿಗಳು ಅಲ್ಲಲ್ಲಿ ಕಣ್ಮರೆಯಾಗಿವೆ. ಇನ್ನೂ ಕೆಲವೆಡೆ ಸೋಲಾರ್ ಛಾವಣಿ ಇದ್ದರೂ, ದೀಪಗಳೇ ಇಲ್ಲ. ಅಲ್ಲಲ್ಲಿ ಸೋಲಾರ್ ದೀಪದ ಕಂಬಗಳು ನೆಲಕ್ಕುರುಳಿವೆ. ಸಾರ್ವಜನಿಕರ ಅನುಕೂಲ ಮತ್ತು ಸುರಕ್ಷತೆಗಾಗಿ ಅಳವಡಿಸಿರುವ ಸೋಲಾರ್ ದೀಪಗಳು ನಿರ್ವಹಣೆ ಕೊರತೆಯಿಂದ ಹಾಳಾಗಿ, ಅವಶೇಷಗಳಂತೆ ಕಾಣಿಸಿಕೊಳ್ಳುತ್ತಿದ್ದು, ದೇಶಿ ವಿದೇಶಿ ಪ್ರವಾಸಿಗರ ಕ್ಯಾಮರಗಳಲ್ಲಿ ಸೆರೆಯಾಗುತ್ತಿವೆ. ಸಂಜೆ ನಂತರ ಈ ಭಾಗದಲ್ಲಿನ ದೇಗುಲಗಳಿಗೆ ಹೋಗಿಬರುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪ್ರವಾಸಿಗರು ಮತ್ತು ಭಕ್ತರನ್ನು ಕಾಡಲಾರಂಭಿಸಿದೆ.
ಸೌಲಭ್ಯ: ನೆರೆಯ ಆಂಧ್ರಪ್ರದೇಶ, ತಮಿಳು ನಾಡಿನಲ್ಲಿನ ಪ್ರಖ್ಯಾತ ದೇವಸ್ಥಾನಗಳಲ್ಲಿ ಪ್ರವಾಸಿಗರಿಗೆ ದೊರೆಯುತ್ತಿರುವ ಮೂಲಭೂತ ಸೌಲಭ್ಯಗಳನ್ನು ನೋಡಿಯಾದರೂ ಇಲ್ಲಿನ ಅಧಿಕಾರಿಗಳು ಹಂಪಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಕಾಲ್ನಡಿಗೆ ಮಾರ್ಗದುದ್ದಕ್ಕೂ ಕುಡಿಯುವ ನೀರು, ಶೌಚಾಲಯಗಳನ್ನು ನಿರ್ಮಿಸಿದಾಗ ಪುಣ್ಯಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭಕ್ತರು ಆಗಮಿಸುತ್ತಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಷ್ಟು ಪ್ರವಾಸೋಧ್ಯಮ ಅಭಿವೃದ್ಧಿ ಹೊಂದಲಿದೆ. ಪ್ರವಾಸಿಗರನ್ನೆ ನಂಬಿರುವ ಅನೇಕ ಕುಟುಂಬಗಳಿಗೂ ಆಸರೆಯಾಗಲಿದೆ. ಸಾಗರೋಪಾದಿಯಲ್ಲಿ ಹಂಪಿ ಫಲಪೂಜಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ ಕಲ್ಪಿಸಲು ಇನ್ನಾದರೂ ಅಧಿಕಾರಿಗಳು ಕ್ರಮವಹಿಸುವರೆ ಕಾದುನೋಡಬೇಕಾಗಿದೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ