https://youtu.be/NHc6OMSu0K4?si=SI_K4goOPEgwo6h2
ಅಂಜನಾದ್ರಿಯಲ್ಲಿ ಅನುರಣಿಸಿದ ಜೈಶ್ರೀರಾಮ ಮಂತ್ರ
ಕೊಪ್ಪಳ(ಗಂಗಾವತಿ): ಹನುಮ ಜಯಂತಿಯ ಅಂಗವಾಗಿ ಗಂಗಾವತಿ ನಗರದ ಪ್ರಮುಖ ವೃತ್ತಗಳಲ್ಲಿ ಹನುಮಮಾಲಾ ಧಾರಿಗಳಿಂದ ಅದ್ದೂರಿಯಾಗಿ ಆಯೋಜಿಸಿರುವ ಶೋಭಾಯಾತ್ರೆಯಲ್ಲಿ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಭಾಗಿಯಾಗಿದ್ದಾರೆ.ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹನುಮಮಾಲೆಯನ್ನು ಧರಿಸಿದ ಸಾವಿರಾರು ಸಂಖ್ಯೆಯ ಮಾಲಾಧಾರಿಗಳು ಘೋಷಣೆಗಳನ್ನು ಕೂಗುವ ಮೂಲಕ ಶೋಬಾಯಾತ್ರೆಯಲ್ಲಿ ಭಾಗವಹಿಸಿದರು. ಶೋಭಾಯಾತ್ರೆಯಲ್ಲಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಗಾಲಿ ಜನಾಧ೯ನ ರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಅನೇಕರು ಹನುಮಮಾಲೆಯನ್ನು ಧರಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಅಂಜನಾದ್ರಿಯಲ್ಲಿ ಸೋಮವಾರ ಅಗಣಿತ ಹನುಮಮಾಲಾಧಾರಿಗಳು ಆಂಜನೇಯನ ದರುಶನ ಪಡೆದು ಪುನೀತರಾದರು. ಹನುಮ ಭಕ್ತರ ದಂಡು ಭಾನುವಾರ ರಾತ್ರಿಯಿಂದಲೇ ಅಂಜನಾದ್ರಿಗೆ ದಾಂಗುಡಿ ಇಟ್ಟಿದ್ದು, ಅಂಜನಿಸುತನ ದರ್ಶನ ಪಡೆದು ಮಾಲೆ ವಿಸರ್ಜಿಸುವ ಕಾರ್ಯ ಸುಸೂತ್ರವಾಗಿ ನಡೆಯಿತು. ರಾಮಾಯಣದ ಆಂಜನೇಯ ಜನಿಸಿದ ಪುಣ್ಯ ಭೂಮಿಯಾದ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹನುಮ ಮಾಲಾ ವ್ರತಧಾರಿಗಳ ಮಾಲೆ ವಿಸರ್ಜನೆ ಕಾರ್ಯ ಪ್ರತಿ ವರ್ಷದಂತೆ ಸೋಮವಾರ ನಡೆಯುತ್ತಿದೆ. ಆಂಜನೇಯ ಜನಿಸಿದ ಸ್ಥಳ ವಿವಾದ ಸಂಬಂಧ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿ ಅಂಜನಾದ್ರಿ ಬೆಟ್ಟ ಹಿಂದೆಗಿಂತಲೂ ಗಮನ ಸೆಳೆದಿದೆ. ಪೂರಕವಾಗಿ ಜಿಲ್ಲಾಡಳಿತ ಈ ವರ್ಷ ಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಅಚ್ಚುಕಟ್ಡಾಗಿ ಆಯೋಜಿಸಿದ್ದು, ಭಾನುವಾರದಿಂದಲೇ ಮಾಲಾಧಾರಿಗಳು ಬೆಟ್ಟದ ಹತ್ತಿರ ಜಮಾಯಿಸಿದ್ದಾರೆ.
ಚಿತ್ರದುರ್ಗ, ದಾವಣಗೇರೆ, ಬೆಳಗಾವಿ, ಕಲಬುರ್ಗಿ, ಬೀದರ್, ಗದಗ, ಹುಬ್ಬಳ್ಳಿ, ಹಾವೇರಿ, ಬಳ್ಳಾರಿ, ವಿಜಯನಗರ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ, ನೆರೆ ರಾಜ್ಯಗಳಿಂದಲೂ ಅಂಜನಿಸುತನ ಭಕ್ತರು ಹನುಮಮಾಲೆ ವಿಸರ್ಜನೆಗೆ ಆಗಮಿಸುತ್ತಿದ್ದಾರೆ. ಪಾದಾಯಾತ್ರೆ ಮೂಲಕ ಬಂದವರು ಭಾನುವಾರವೇ ಬೆಟ್ಟ ತಲುಪಿ ಸೋಮವಾರ ಬೆಳಗ್ಗೆಯಿಂದ ಸ್ವಾಮಿ ದರ್ಶನ ಪಡೆದು ನಿರ್ಗಮಿಸುತ್ತಿದ್ದಾರೆ. ಬಂದವರಿಗಾಗಿ ಚಿಕ್ಕರಾಂಪುರ ಬಳಿ ಪ್ರಸಾದ ವ್ಯವಸ್ಥೆ ಮಾಡಿದ್ದು, ಲಕ್ಷಾಂತರ ಜನರು ಸವಿಯುತ್ತಿದ್ದಾರೆ.
ಶ್ರೀರಾಮ, ಆಂಜನೇಯನ ನೆನಹು ಮಾಲಾಧಾರಿಗಳು ಶ್ರೀರಾಮ, ಆಂಜನೇಯ ಹಾಗೂ ನಟ ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಜೈ ಶ್ರೀರಾಮ ಮಂತ್ರ ಜಪಿಸುತ್ತ ಸಾಗುವುದು ಕಂಡುಬಂತು.
ಅನ್ನಸಂತರ್ಪಣೆ: ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ದಾರಿಯುದ್ದಕ್ಕೂ ಹಲವು ಗ್ರಾಮಸ್ಥರು ಭಕ್ತರಿಗಾಗಿ ಪ್ರಸಾದ, ಉಪಾಹಾರ ಹಾಗೂ ಪಾನಕ ವ್ಯವಸ್ಥೆ ಕಲ್ಪಿಸಿದ್ದು ಕಂಡುಬಂತು. ಶಿವಪುರ, ಅಗಳಕೇರಾ, ಬಂಡಿ ಹರ್ಲಾಪುರ, ಹನುಮನಳ್ಳಿ ಗ್ರಾಮದಲ್ಲಿ ಪ್ರಸಾದ ಸೇವೆ ಸಲ್ಲಿಸುವುದು ಗಮನ ಸೆಳೆಯಿತು. ಸಂಕೀರ್ತನ ಯಾತ್ರೆ: ಹನುಮ ಮಾಲೆ ವಿಸರ್ಜನೆ ಹಿನ್ನಲೆಯಲ್ಲಿ ಗಂಗಾವತಿ ನಗರದಲ್ಲಿ ಹಿಂದುಪರ ಸಂಘಟನೆಗಳು ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿದ್ದು, ಭಜರಂಗದಳ, ಹಿಂದು ಜಾಗರಣ ವೇದಿಕೆ ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ಮಾಲಾಧಾರಿಗಳು, ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.
More Stories
ಜನರು ಧಂಗೆ ಏಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ , ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲು: ಉಪ ಲೋಕಾಯುಕ್ತ ಬಿ.ವೀರಪ್ಪ
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ