https://youtu.be/NHc6OMSu0K4?si=SI_K4goOPEgwo6h2
HAMPI TIMES
ಕೊಪ್ಪಳ: ಪ್ರತಿಯೊಬ್ಬರ ಕಿಸೆಯಲ್ಲಿ 10 ಪೈಸೆ ಇಲ್ಲದಿದ್ದರೂ ಅವರು ಉದ್ಯಮಿಯಾಗಲು ಅನುಕೂಲವಾಗುವಂತಹ ಅವಕಾಶಗಳಿವೆ. ಹೊಸ ಕೈಗಾರಿಕಾ ನೀತಿ 2020-25ಯನ್ನು ರಾಜ್ಯ ಸರ್ಕಾರ ವಿಶಿಷ್ಟವಾಗಿ ರೂಪಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.
ಕೈಗಾರಿಕಾ ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ವಿಜಯನಗರ, ಗದಗ ಹಾಗೂ ಕರ್ನಾಟಕ ತಾಂತ್ರಿಕ ಸಂಸ್ಥೆ ಮತ್ತು ಕೈಗಾರಿಕಾ ವಾಣಿಜ್ಯ ಇಲಾಖೆ ಕೊಪ್ಪಳ ವಿಜಯನಗರ ಮತ್ತು ಗದಗ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 3ರಂದು ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ಹಮ್ಮಿಕೊಂಡಿದ್ದ ಕೈಗಾರಿಕಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕೆಯು ಶಿಕ್ಷಣದಷ್ಡೇ ಮಹತ್ವದ ಕ್ಷೇತ್ರವಾಗಿದೆ. ಶಿಕ್ಷಣ ಮತ್ತು ಕೈಗಾರಿಕೆಗಳು ಸರಿಯಾಗಿರುವ ದೇಶಗಳು ಸಾಕಷ್ಟು ಮುಂದುವರೆದಿವೆ. ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅದನ್ನು ಬಳಸಿಕೊಂಡು ತಾವುಗಳು ಕೈಗಾರಿಕೆಗಳನ್ನು ಸ್ಥಾಪಿಸಿ ಇತರರಿಗೆ ಉದ್ಯೋಗ ಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಮನವಿ ಮಾಡಿದ ಸಚಿವರು, ಇದಕ್ಕಾಗಿ ಸರಕಾರವು ಸಾವಿರಾರು ಕೋಟಿ ರೂ ವ್ಯಯಿಸುತ್ತಿದ್ದು ಇದರ ಸದುಪಯೋಗವಾಗಬೇಕು ಎಂದರು.
ಮಾನ್ಯ ಪ್ರಧಾನಿ ಮಂತ್ರಿಗಳ ಆತ್ಮನಿರ್ಬರ್ ಭಾರತ ಕನಸನ್ನು 100 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನನಸು ಮಾಡಿದ್ದರು ಎಂಬುದು ನಮಗೆ ಹೆಮ್ಮೆಯ ವಿಷಯ. ಬೆಳಗ್ಗೆಯಿಂದ ಸಂಜೆವರೆಗೆ ನಾವು ಬಳಸುವ ಎಲ್ಲ ವಸ್ತುಗಳ ತಯಾರಿಕೆಯನ್ನು ಒಡೆಯರ್ ಅವರು ಶತಮಾನದ ಹಿಂದೆಯೇ ನಡಿಸಿದ್ದರು. ಈ ಕಾರಣದಿಂದಲೇ ಜಗತ್ತಿನ ನಕ್ಷೆಯಲ್ಲಿ ಮೈಸೂರ ವಿಶೇಷ ಸ್ಥಾನ ಪಡೆದಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ಹಿಂದುಳಿಯಲು ಕಾರಣ ನೀರಾವರಿ ಮತ್ತು ಕೈಗಾರಿಕೆಗಳು ಕಡಿಮೆ ಇರುವುದಕ್ಕೆ. ಹೀಗಾಗಿ ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಯ ಸಾರ್ವಜನಿಕರು ಕೈಗಾರಿಕಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕೈಗಾರಿಕಾ ಪ್ರಗತಿಯಲ್ಲಿ ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಗಳು ಕೂಡ ಉತ್ತಮ ಸ್ಥಾನ ಪಡೆಯಬೇಕು. ಉದ್ಯಮಿಯಾಗುವ ಆಸೆ ಹೊಂದಿದ ಯಾರೇ ಇರಲಿ ನೀವು ಕೈಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಸಿರಿ. ನಿಮ್ಮನ್ನು ತಂಡಗಳನ್ನಾಗಿಸಿ ತರಬೇತಿಗೊಳಿಸಿ ನಿಮ್ಮನ್ನು ಉದ್ಯಮಿಯಾಗಿಸುವುದು ನಮ್ಮ ಕೈಗಾರಿಕಾ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸರ್ ಎಂ ವಿಶ್ವೇಶ್ವರಯ್ಯ ಅವರು ಕಂಡಂತಹ ಕನಸುಗಳು ನಿಮ್ಮದಾಗಬೇಕು. ನಾನು ಕೈಗಾರಿಕೋದ್ಯಮಿ ಆಗಲೇಬೇಕು ಎನ್ನುವ ಹಠ ನಿಮ್ಮದಾಗಬೇಕು. ಬ್ಯಾಂಕಿನವರೊಂದಿಗೆ ವಿಶ್ವಾಸಗಳಿಸಿಕೊಳ್ಳಬೇಕು. ಅಂದಾಗ ಉದ್ಯಮಿಯಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 100 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕಿದೆ. ಗದಗ ಜಿಲ್ಲೆಯಲ್ಲಿ ಶೆ.38ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇ.65ರಷ್ಟು ಮತ್ತು ವಿಜಯನಗರ ಜಿಲ್ಲೆಯಲ್ಲಿ ಶೇ.5ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸದರು, ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಎಂಡಿ ರವೀಂದ್ರ ಗುಮಾಸ್ತೆ, ವಿಜಯನಗರ ಜಿಲ್ಲಾ ಅಧ್ಯಕ್ಷ ಅಶ್ವಿನ್ ಕೋತಂಬ್ರಿ, ಗದಗ ಜಿಲ್ಲಾಧ್ಯಕ್ಷ ಮಧುಸೂಧನ ಪುನೇಕರ್, ಜಿಲ್ಲಾಧಿಕಾರಿ, ಜಿಪಂ ಸಿಇಓ ಹಾಗು ಇನ್ನೀತರರು ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ