https://youtu.be/NHc6OMSu0K4?si=SI_K4goOPEgwo6h2
HAMPI TIMES
ಕೊಪ್ಪಳ: ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವ ಕೇಂದ್ರ ಸರ್ಕಾರ, ಸದ್ದಿಲ್ಲದೇ ವಿದ್ಯುತ್ ಖಾಸಗೀಕರಣ ಮಸೂದೆ ಮಂಡಿಸಿದೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿರುವುದನ್ನು ಖಂಡಿಸಿ ನ.26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಆದರೆ, ಇತ್ತೀಚೆಗೆ ಐದು ಮಸೂದೆ ಮಂಡಿಸಿದೆ. ಅದರಲ್ಲಿ ವಿದ್ಯುತ್ ಖಾಸಗೀಕರಣ ಮಸೂದೆ ಒಂದು. ಮುಂದೆ ಇದು ಕಾನೂನು ಆಗಲಿದೆ. ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಕಾಯ್ದೆ ಅನ್ವಯವಾಗಲಿದೆ ಎಂದು ಕೇಂದ್ರ ಹೇಳಿದೆ. ಈಗಾಗಲೇ ನಾಲ್ಕು ರಾಜ್ಯಗಳು ತಿರಸ್ಕರಿಸಿವೆ. ಆದರೆ, ನಮ್ಮ ರಾಜ್ಯದಲ್ಲಿ ಕಾಯ್ದೆಗೆ ಜಾರಿಗೆ ಸರ್ಕಾರ ಉತ್ಸುಕವಾಗಿದೆ. ಮಾತಿಗೆ ಖಾಸಗೀಕರಣ ಮಾಡುವುದಿಲ್ಲವೆಂದು ಸಿಎಂ ಬೊಮ್ಮಾಯಿ ಹೇಳುತ್ತಾರೆ. ಮಾಡದಿದ್ದರೆ ಅವರನ್ನೇ ಬದಲಾವಣೆ ಮಾಡಿ ಕಾಯ್ದೆ ಜಾರಿ ಮಾಡುವಷ್ಟು ಕೇಂದ್ರ ಸರ್ಕಾರ ಪ್ರಬಲವಾಗಿದೆ ಎಂದರು.
ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್ ಸೆಟ್ ಗಳಿವೆ. ಕೇಂದ್ರ ಕೋವಿಡ್ ನಲ್ಲಿ ಘೋಷಿಸಿದ 20ಲಕ್ಷ ಕೋಟಿ ಬಜೆಟ್ ನಲ್ಲಿ ಎರಡು ಲಕ್ಷ ಕೋಟಿ ರೂ. ಸ್ಮಾರ್ಟ್ ಮೀಟರ್ ಕಂಪನಿಗೆ ನೀಡಿದೆ. ಪೂರ್ವ ಪಾವತಿ ಮೀಟರ್ ಗಳನ್ನು ಅಳವಡಿಸಲು ಯೋಜಿಸಿದ್ದು, ರೈತರು ಮುಂಚಿತವಾಗಿ ರೀಚಾರ್ಜ್ ಮಾಡಿಕೊಳ್ಳಬೇಕು. ವಿದ್ಯುತ್ ನಿಗಮಗಳ ಆಸ್ತಿ ಮೊತ್ತ 10ಲಕ್ಷ ಕೋಟಿ ರೂ.ಆಗುತ್ತದೆ. ಅದನ್ನು ಕೆಲವೇ ಲಕ್ಷ ಕೋಟಿಗೆ ಖಾಸಗಿಯವರಿಗೆ ನೀಡುತ್ತಾರೆ. ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು. ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಆಗಮಿಸುವರು. ಡಿ.5ರಿಂದ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸರ್ವೋದಯ ಪಕ್ಷಕ್ಕೆ ಪುನರ್ಜನ್ಮ ನೀಡಲಾಗುವುದೆಂದರು.
ರೈತ ಮುಖಂಡರಾದ ಭೀಮಸೇನ ಕಲಿಕೇರಿ, ತಿಪ್ಪೇಸ್ವಾಮಿ, ಗವಿಸಿದ್ದಪ್ಪ ಬಗನಾಳ, ಅಮ್ಜದ ಪಾಷಾ ಇದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ