https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಆಟೋ ಚಾಲಕ ಹಾಗೂ ಹಂಪಿ ಮಾರ್ಗದರ್ಶಿಯಾಗಿ ಐತಿಹಾಸಿಕ ಹಂಪಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರವಾಸಿಗರಿಗೆ ಉಣಬಡಿಸುತ್ತಿರುವ ಹಂಪಿ ನಿವಾಸಿ ಅನಂತರಾಜುವಿನ ಜೊತೆ 2022 ರ ನವೆಂಬರ್ 25ರಂದು ಸಪ್ತಪದಿ ತುಳಿಯಲಿದ್ದಾರೆ ಬೆಲ್ಜಿಯಂ ಕನ್ಯೆ ಕೆಮಿಲ್.
ಹೌದು, ಮೂರು ವರ್ಷದ ಹಿಂದೆ ಹಂಪಿಯ ಗತವೈಭವವನ್ನು ಅರಿಯಲು ಬೆಲ್ಜಿಯಂ ದೇಶದಿಂದ ಹಂಪಿಗೆ ಆಗಮಿಸಿದ್ದ ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಅವರ ಪರಿವಾರ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯವಾಗಿದೆ. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದಾನೆ. ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ ಪ್ರೇಮ ಅರಳಿತು.
ಮೂರು ವರ್ಷದ ಹಿಂದೆಯೇ ಪ್ರೇಮದ ವಿವಾಹವಾಗಬೇಕಿದ್ದ ಜೋಡಿಗೆ ಕರೋನ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾವಹನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಗುರುವಾರ ಸಂಜೆ ಕುಟುಂಬ ಪರಿವಾರದೊಂದಿಗೆ ನಿಶ್ಚಿತಾರ್ಥ (ಎಂಗೇಜ್ಮೆಂಟ್) ನೆರವೇರಿಸಿದರು. ನ.25 ಶುಕ್ರವಾರ ಬೆಳಿಗ್ಗೆ 8.30 ರಿಂದ 9.30ರವರೆಗೆ ಸಲ್ಲುವ ಕುಂಭ ಲಗ್ನದ ಶುಭಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಲಿದೆ. ಬೆಲ್ಜಿಯಂ ದೇಶದ ಕನ್ಯೆ ವರಿಸಲಿರುವ ಅನಂತರಾಜು.ವಿ. ಹಂಪಿ ಜನತಾ ಪ್ಲಾಟಿನ ನಿವಾಸಿ ರೇಣುಕಮ್ಮ, ದಿ|| ಅಂಜಿನಪ್ಪನವರ ಪುತ್ರನಾಗಿದ್ದಾನೆ.
|| ವಿದೇಶಿಗರು ಹಿಂದೂ ಸಂಪ್ರದಾಯ ಅಪ್ಪಿಕೊಂಡು ಭಾರತೀಯ ಸಂಸ್ಕಾರ ಪಾಲನೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಭಾರತೀಯ ಸಂಸ್ಕೃತಿ ವಿದೇಶಿಗರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದುನ್ನು ವಿದೇಶಿಗರ ನಡೆ, ನುಡಿ, ಉಡುಗೆ ತೊಡುಗೆಗಳಿಂದ ತಿಳಿಯಬಹುದು. ನಮ್ಮ ಸಂಸ್ಕೃತಿಯನ್ನು ನಾವುಗಳು ಸದಾ ಗೌರವಿಸಬೇಕು.||
- ಗೋಪಾಲ ಹಂಪಿ ಮಾರ್ಗದರ್ಶಕ, ಅಧ್ಯಕ್ಷರು, ವಿದ್ಯಾರಣ್ಯ ಮಾರ್ಗದರ್ಶಕ ಸಂಘ, ಹಂಪಿ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ