October 14, 2024

Hampi times

Kannada News Portal from Vijayanagara

ವಿದ್ಯಾರ್ಥಿಗಳು ನವರತ್ನಗಳಾಗಿ ಹೊರಹೊಮ್ಮಲಿದ್ದಾರೆ: ಪ್ರಾಂಶುಪಾಲ ಡಾ.ರೇವಣಸಿದ್ದಪ್ಪ ಹೇಳಿಕೆ

 

https://youtu.be/NHc6OMSu0K4?si=SI_K4goOPEgwo6h2

 

 

ನ್ಯಾಷನಲ್ ಕಾಲೇಜಿನಲ್ಲಿ ಮೊದಲ ವರ್ಷದ ವಾಣಿಜ್ಯ ಪದವಿ ಪ್ರಾರಂಭ
ಮುಂದಿನ ವರ್ಷದಿಂದ ಬಿ.ಸಿ.ಎ., ಬಿ.ಬಿ.ಎಂ. ಪದವಿ ಆರಂಭ

HAMPI TIMES

ಹೊಸಪೇಟೆ: ನಗರದ ಪ್ರತಿಷ್ಠಿತ ವಿನಾಯಕ ಶಿಕ್ಷಣ ಸಂಸ್ಥೆ ನೂತನವಾಗಿ ಆರಂಭಿಸಿರುವ ವಾಣಿಜ್ಯ ಪದವಿ ಕಾಲೇಜ್‌ನಲ್ಲಿ ಮೊದಲ ವರ್ಷ ಪ್ರವೇಶ ಪಡೆದಿರುವ ಒಂಬತ್ತು ವಿದ್ಯಾರ್ಥಿಗಳು ನವರತ್ನಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರೇವಣಸಿದ್ದಪ್ಪ ಹೇಳಿದರು.


ನಗರದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊದಲ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯದೊಂದಿಗೆ ಆರಂಭಗೊಂಡಿರುವ ಕಾಲೇಜಿನಲ್ಲಿ ಕ್ರೀಯಾಶೀಲ ಆಡಳಿತ ಮಂಡಳಿ, ಯುವ ಉತ್ಸಾಹಿ ಉಪನ್ಯಾಸಕರಿದ್ದಾರೆ. ರಾಷ್ಟ್ರದ ಪ್ರಗತಿಯಲ್ಲಿ ವಾಣಿಜ್ಯ ಅಧ್ಯಯನ ಮಹತ್ವ ಪಡೆದಿದೆ. ವಾಣಿಜ್ಯ ಪದವಿ  ಎಂಬುದು ವೈಬ್ರೆಂಟ್ ಪದವಿಯಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿಗೆ ಸೀಮಿತಗೊಳ್ಳದೇ, ಸ್ನಾತಕೋತ್ತರ ಪದವಿ ಹಾಗೂ ಮಾರುಕಟ್ಟೆಗೆ ಅಗತ್ಯವಿರುವ ಕೌಶಲ್ಯಯುತ ಶಿಕ್ಷಣವನ್ನು ಪಡೆಯಬೇಕು. ಭಾಷೆ ಹಿಡಿತ, ಉತ್ತಮ ಅಂಕ ಮತ್ತು ಕೌಶಲ್ಯ ರೂಡಿಸಿಕೊಂಡಿರುವವರು ಎಂದೂ ನಿರುದ್ಯೋಗಿಯಾಗಿರಲಾರರು. ವಾಣಿಜ್ಯ ಶಿಕ್ಷಣ ಅಧ್ಯಯನ ದೇಶದ ಆರ್ಥಿಕ ವೃದ್ಧಿಗೆ ಸಹಕಾರಿಯಾಗಬಲ್ಲದು. ಜಗತ್ತು ಆತ್ಮೀಯವಾಗಿ ಬರಮಾಡಿಕೊಳ್ಳುವಂತೆ ನ್ಯಾಷನಲ್ ಪದವಿ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು ಎಂದರು.


ವಿನಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಾಲಿ ಬಸವರಾಜ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಗತ್ಯ ಸೌಲಭ್ಯಗಳೊಂದಿಗೆ ವಾಣಿಜ್ಯ ಪದವಿ ಕಾಲೇಜ್ ಆರಂಭಿಸಲಾಗಿದೆ. ಮೊದಲ ವರ್ಷದಲ್ಲಿ ಪ್ರವೇಶ ಪಡೆದಿರುವ ಒಂಬತ್ತು ವಿದ್ಯಾರ್ಥಿಗಳು ನಮ್ಮ ಕಾಲೇಜಿನ ನವರತ್ನಗಳು. ವಿದ್ಯಾರ್ಥಿಗಳ ಕಲಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಮುಂದಿನ ವರ್ಷದಿಂದ ಬಿ.ಸಿ.ಎ ಮತ್ತು ಬಿ.ಬಿ.ಎಂ ಪದವಿ ಆರಂಭಿಸಲಾಗುವುದು.  ಇಂದು 9 ವಿದ್ಯಾರ್ಥಿಗಳಿಂದ ಆರಂಭವಾಗಿರುವ ನ್ಯಾಷನಲ್ ಪದವಿ ಕಾಲೇಜ್ ಭವಿಷ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಿದೆ ಎಂದರು.

ನ್ಯಾಷನಲ್ ಪದವಿ ಕಾಲೇಜ್ ಅಧ್ಯಕ್ಷ ಕಾಕುಬಾಳ್ ಶ್ರೀನಿವಾಸ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಬೇಕೆಂದ ಛಲ, ಹಸಿವು ಇರಬೇಕು. ಜ್ಞಾನದ ಹಸಿವು ಇದ್ದವರು ಅವಕಾಶಗಳನ್ನು ಕಾಯುವುದಿಲ್ಲ, ಅವರೇ ಅವಕಾಶಗಳನ್ನು ಸೃಷ್ಠಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಕಲಿಕಾ ಇಚ್ಚಾಶಕ್ತಿ ಬೆಳೆಸಿಕೊಂಡಲ್ಲಿ ಸಾಧನೆ ಕೈಗೆಟುಕಲಿದೆ ಎಂದರು.


ವಿನಾಯಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಾಕುಬಾಳ್ ರಾಜೆಂದ್ರ, ಉಪಪ್ರಾಂಶುಪಾಲ ವಿಜಯಕುಮಾರ ಪಲ್ಲೇದ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಬಿ.ಈಡಿ ಕಾಲೇಜ್ ಪ್ರಾಂಶುಪಾಲ ಡಾ.ಅಯೂಬ್‌ಖಾನ್, ಸೂಪರಿಡೆಂಟ್ ವಿಶ್ವಾರಾಧ್ಯ ಉಪಸ್ಥಿತರಿದ್ದರು.  ಕಾಲೇಜಿನ ಪದವಿ ಹಾಗೂ ಬಿ.ಈಡಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದು ಇದ್ದರು. ಪ್ರಿಯಾಂಕ ಪ್ರಾರ್ಥಿಸಿದರು, ಚೈತ್ರ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.ಕಾಲೇಜಿನ ಸಿಬ್ಬಂದಿಗಳಾದ ರೇಷ್ಮಾ, ರುಬಿನಾ ನಿರ್ವಹಿಸಿದರು.

 

 

 

ಜಾಹೀರಾತು
error: Content is protected !!