https://youtu.be/NHc6OMSu0K4?si=SI_K4goOPEgwo6h2
ಕೊಪ್ಪಳ ಜಿಲ್ಲೆಯ ಸ್ನಾತಕೋತ್ತರ ಕೇಂದ್ರವೊಂದರ ಸಹಾಯಕ ಪ್ರಾಧ್ಯಾಪಕನ ವಿರುದ್ಧ ದೂರು
HAMPI TIMES
ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆರಂಭವಾಗಿ ದಶಕದ ಮೇಲಾದರೂ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿ ನರಳುತ್ತಿದೆ. ವಿವಿ ವ್ಯಾಪ್ತಿಯಲ್ಲಿ ಸಂಶೋಧನಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮಹತ್ತರ ಘಟ್ಟ ತಲುಪಿದ್ದು, ಸಂಶೋಧನಾರ್ಥಿಯೊಬ್ಬರಿಗೆ ಕೊಪ್ಪಳ ಜಿಲ್ಲೆಯ ಸ್ನಾತಕೋತ್ತರ ಕೇಂದ್ರವೊಂದರ ಸಹಾಯಕ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ವಿವಿ ವ್ಯಾಪ್ತಿ ಸಂಚಲನ ಮೂಡಿಸಿದೆ.
ಸಂಶೋಧನಾರ್ಥಿನಿ ಕುಲಸಚಿವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರಿಂದ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಬಳಿಕ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್ ಅವರು, ಈಚೆಗೆ ಕೊಪ್ಪಳ ಜಿಲ್ಲೆಯಲ್ಲಿರುವ ಸ್ನಾತಕೋತ್ತರ ಕೇಂದ್ರಕ್ಕೆ ಆಗಮಿಸಿ, ಸಂತ್ರಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕನನ್ನು ಕರೆಯಿಸಿ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಸದರಿ ಸಂಶೋಧನಾರ್ಥಿನಿ ಈ ಮುಂಚೆ ಬಳ್ಳಾರಿಯ ಮೇನ್ ಕ್ಯಾಂಪಸ್‌ನಲ್ಲಿ ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿದ್ದರು. ಆದರೆ, ನಂತರ ಗೈಡ್ ಬದಲಾಯಿಸಿಕೊಂಡು ಕೊಪ್ಪಳ ಜಿಲ್ಲೆಯಲ್ಲಿದ್ದ ಸಹಾಯಕ ಪ್ರಾಧ್ಯಾಫಕರ ಬಳಿ ಸಂಶೋಧನೆ ಮುಂದುವರಿಸಿದ್ದರು. ಪಿಎಚ್‌ಡಿ ನಿಯಮಾನುಸಾರ ಮಾರ್ಗದರ್ಶಕರು ಎಲ್ಲಿ ಕಾರ್ಯ ನಿರ್ವಹಿಸುತ್ತಾರೆ, ಅಲ್ಲಿಗೆ ತೆರಳಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ಮಾಡಬೇಕಾಗಿದ್ದರಿಂದ ವಿದ್ಯಾರ್ಥಿನಿ ಕೊಪ್ಪಳ ಜಿಲ್ಲೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಸ್ಕೆ ವಿವಿಯೂ ಸಿಂಡಿಕೇಟ್ ಸದಸ್ಯೆ ಪದ್ಮಾ ವಿಠಲ್, ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಪವಿತ್ರಾ, ಪ್ರೊ.ಗೌರಿ ಮಾಣಿಕ್ ಮಾನಸ, ಕಾನೂನು ಅಧಿಕಾರಿ ಜುಬೇರ್ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿಯೂ ವಿಚಾರಣೆ ನಡೆಸಿದ್ದು, ಈವರೆಗೂ ವರದಿ ನೀಡಿಲ್ಲ ಎನ್ನಲಾಗುತ್ತಿದೆ. ವರದಿ ಬಂದ ನಂತರ ಸಂಪೂರ್ಣ ವಿಷಯ ಬೆಳಕಿಗೆ ಬರಲಿದೆ.
ಇರಿಸು-ಮುರಿಸು: ಬಳ್ಳಾರಿ ವಿವಿಯೂ ಈವರೆಗೆ ಮೇನ್ ಕ್ಯಾಂಪಸ್ ಜತೆ ಮೂರು ಸ್ನಾತಕೋತ್ತರ ಕೇಂದ್ರ ಒಳಗೊಂಡು, ೧೧೦ಪದವಿ ಕಾಲೇಜುಗಳೊಂದಿಗೆ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆ ವ್ಯಾಪ್ತಿಯೊಳಗೊಂಡಿತ್ತು.
ಆದರೆ, ಸರಕಾರ ಕಳೆದ ಬಜೆಟ್‌ನಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಪರಿಕಲ್ಪನೆಯಡಿ ವಿಎಸ್‌ಕೆ ವಿವಿಯಿಂದ ಕೊಪ್ಪಳ ಜಿಲ್ಲೆ ಬೇರ್ಪಡಿಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಕೊಪ್ಪಳ ಜಿಲ್ಲೆಗೆ ನೂತನ ವಿಶ್ವವಿದ್ಯಾಲಯ ಘೋಷಣೆ ಮಾಡಿತ್ತು. ನೂತನ ವಿವಿ ೨೦೨೩-೨೪ನೇ ಸಾಲಿನಿಂದ ಆರಂಭಗೊಳ್ಳುತ್ತಿರುವ ಮಧ್ಯದಲ್ಲಿಯೇ ಕೊಪ್ಪಳ ಜಿಲ್ಲೆಯ ಸ್ನಾತಕೋತ್ತರ ಕೇಂದ್ರವೊಂದರ ಸಹಾಯಕ ಪ್ರಾಧ್ಯಾಪಕರೊಬ್ಬರ ಮೇಲೆ ಸದರಿ ಆರೋಪ ಬಂದಿರುವುದು ಶೈಕ್ಷಣಿಕ ವಲಯದಲ್ಲಿ ಇರಿಸು-ಮುರಿಸು ಉಂಟಾಗಿದೆ.
ಬಳ್ಳಾರಿ ವಿವಿ ವ್ಯಾಪ್ತಿಯಲ್ಲಿ ಒಟ್ಟು ೯೫ ಪ್ರಾಧ್ಯಾಪಕರಿದ್ದಾರೆ. ಈ ಪೈಕಿ ಪ್ರೋಫೆಸರ್ ೦೮, ಅಸಿಸ್ಟೆಂಟ್ ಪ್ರೊಪೆಸರ್–೦೪, ಅಸೋಸಿಯೇಟ್ ಪ್ರೊಪೆಸರ್- ೬ ಜನರಿಗೆ ಸಂಶೋಧನೆಗೆ ಮಾರ್ಗದರ್ಶನ ಮಾಡಲು ಅವಕಾಶವಿದೆ.
ಈ ರೀತಿ ವಿವಿಯಲ್ಲಿ ೧೫೦ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ವಿವಿಧ ವಿಷಯದಡಿ ಪ್ರಸಕ್ತ ಸಾಲಿನಲ್ಲಿ ಪ್ರಾಧ್ಯಾಪಕರ ಮಾರ್ಗದರ್ಶನದಡಿ ಸಂಶೋಧನೆಗೆ ಆಯ್ಕೆಯಾಗಿದ್ದಾರೆ.
|| ಇಂದು-ನಿನ್ನೆಯದಲ್ಲ ಈ ಕಥೆ-ವ್ಯಥೆ: ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಂಶೋಧನಾರ್ಥಿಗಳಿಗೆ ಕೆಲ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಲೈಂಗಿಕ ದೌರ್ಜನ್ಯ ಎಸಗುತ್ತಿರುವುದರ ಜತೆಗೆ ಅನಗತ್ಯ ಕಿರಿಕಿರಿ ಮಾಡುತ್ತಿರುವ ಗಂಭೀರ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಮಾರ್ಗದರ್ಶಕರು ತಾವು ಪಾಠ ಮಾಡೋದು ಬಿಟ್ಟು, ಸಂಶೋಧನಾರ್ಥಿಗಳನ್ನು ತರಗತಿಗಳಿಗೆ ಕಳುಹಿಸಿ ಪಠ್ಯ ಮುಗಿಸುತ್ತಿರುವ ಉದಾಹರಣೆಗಳು ಕೂಡ ನಡೆದಿರುವ ಆರೋಪಗಳಿವೆ. ತಾವು ಮಾತ್ರ ಯುಜಿಸಿ ವೇತಾನುಸಾರ ತಿಂಗಳಿಗೆ ಲಕ್ಷ, ಲಕ್ಷ ಸಂಬಳ ಪಡೆಯುತ್ತಾರೆ. ಆದರೆ, ಮಾಡಬೇಕಾದ ಕೆಲಸವನ್ನು ಸಂಶೋಧನಾರ್ಥಿಗಳ ಕೈಯಲ್ಲಿ ಮಾಡಿಸುತ್ತಾರೆ. ಅದರಲ್ಲೂ ಪಾಠ ಮಾಡಲು ಸೂಕ್ತ ಸಂಶೋಧನಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಮಾರ್ಗದರ್ಶನ ನೀಡೋ ನೆಪದಲ್ಲಿ ವಾರದಲ್ಲಿ ಮೂರ‍್ನಾಲ್ಕು ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತಿದ್ದಾರಂತೆ. ಈ ಹಿಂದೆ ಓರ್ವ ವಿದ್ಯಾರ್ಥಿನಿಗೆ ಓರ್ವ ಪ್ರಾಧ್ಯಾಪಕರು ವಿನಾಕಾರಣ ಅನಗತ್ಯ ಕಿರಿಕಿರಿ ನೀಡುತ್ತಿರುವುದು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರ ಗಮನಕ್ಕೆ ಬಂದಿತ್ತು. ಅವರು ಕೂಡ ಅಂದು ಪ್ರಾಧ್ಯಾಪಕರಿಗೆ ನೇರವಾಗಿ ಹೇಳದೆ, ಅವರಿಗೆ ಬೇಕಾದವರಿಗೆ ಹೇಳಿ, ಅವರ ಮುಖಾಂತರ ಪ್ರಾಧ್ಯಾಪಕರರಾದವರು ಈ ರೀತಿ ಮಾಡುವುದು ಸರಿಯಲ್ಲ. ತಿದ್ದಿಕೊಳ್ಳದಿದ್ದರೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿ ಓರ್ವ ವಿದ್ಯಾರ್ಥಿನಿಯ ಸಮಸ್ಯೆ ಸರಿಪಡಿಸಿದ್ದರು. ಆದರೆ, ಇದು ಒಬ್ಬ ಪ್ರಾಧ್ಯಾಪಕರ ಕಥೆಯಲ್ಲ. ವಿವಿ ವ್ಯಾಪ್ತಿಯ ಹಲವು ಪ್ರಾಧ್ಯಾಪಕರು ತರಗತಿಗೆ ಚಕ್ಕರ್ ಹಾಕಿ, ಅಲ್ಲಿಗೆ ಸಂಶೋಧನಾರ್ಥಿಗಳ ಕೈಯಲ್ಲಿ ಅಟೆಂಡೆನ್ಸ್ ಮೆಂಟೇನ್ ಮಾಡೋದು, ಪಾಠ ಮಾಡಿಸುವ ಮೂಲಕ ಒತ್ತೆಯಾಳುಗಳಂತೆ ದುಡ್ಡಿಸಿಕೊಳ್ಳುತ್ತಿರುವ ಆರೋಪ ಈವರೆಗೆ ಸಾಮಾನ್ಯವಾಗಿತ್ತು. ಒಂದು ವೇಳೆ ಹೇಳದಂತೆ ಕೇಳದಿದ್ದರೇ ಮಾರ್ಗದರ್ಶನ ಸರಿಯಾಗಿ ಮಾಡದೇ ಇರೋದು, ಪಿಎಚ್ ಡಿ ಪೂರ್ಣಗೊಳಿಸದಂತೆ ಮಾಡುವುದು ಸೇರಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂಬ ಮಾತುಗಳು ಬಲವಾಗಿದ್ದವು. ||
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ