https://youtu.be/NHc6OMSu0K4?si=SI_K4goOPEgwo6h2
HAMPI TIMES
ಹೊಸಪೇಟೆ: ಪಂಚಮಸಾಲಿ ಲಿಂಗಾಯತರಿಗೆ ರಾಜ್ಯದಲ್ಲಿ 2ಎ ಮೀಸಲಾತಿ ಹಾಗೂ ಕೇಂದ್ರದಲ್ಲಿ ಒಬಿಸಿ ಪ್ರವರ್ಗಕ್ಕೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ, ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ವಿಜಯನಗರ ಜಿಲ್ಲಾ ಘಟಕದಿಂದ ನ.12 ರಂದು ನಗರದ ಸಹಕಾರಿ ಮೈದಾನದಲ್ಲಿ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಹಾಗೂ ಪಂಚಮಸಾಲಿ ಮೀಸಲಾತಿ ಜನಜಾಗೃತಿ ಸಮಾವೇಶವನ್ನು ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಗೌರವಧ್ಯಕ್ಷ ಬಾವಿಬೆಟ್ಟಪ್ಪ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, ವಿಜಯನಗರ ಜಿಲ್ಲಾಮಟ್ಟದ ಸಮಾವೇಶದಲ್ಲಿ 15ಸಾವಿರಕ್ಕೂ ಅಧಿಕ ಸಮಾಜದ ಬಂಧುಗಳು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 9ಕ್ಕೆ ಶ್ರೀ ಕೊಟ್ಟೂರುಸ್ವಾಮಿ ಮಠದಿಂದ ವೇದಿಕೆವರೆಗೆ 10ಕ್ಕೂ ಅಧಿಕ ಕಲಾತಂಡಗಳೊಂದಿಗೆ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು, ಕಿತ್ತೂರುರಾಣಿ ಚನ್ನಮ್ಮನ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸಾನ್ನಿಧ್ಯ, ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ. ಪ್ರವಾಸೊಧ್ಯಮ ಸಚಿವ ಆನಂದಸಿಂಗ್, ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಅಧ್ಯಕ್ಷತೆವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ದೇಶ, ಎಂಎಲ್ಸಿ ವೈ.ಸತೀಶ, ವಿಜಯನಗರ ಜಿಲ್ಲೆಯ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪಿ.ಟಿ.ಮರೇಶ್ವರ ನಾಯ್ಕ, ಕರುಣಾಕರ ರೆಡ್ಡಿ, ಭೀಮಾನಾಯ್ಕ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಸಮಾಜದ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ನಡೆಯುತ್ತಿರುವ ಹೋರಾಟಗಳು ಇಂದು ನಿನ್ನೆಯದಲ್ಲ. ಕಳೆದ 29 ವರ್ಷಗಳಿಂದ ಸಮಾಜದ ಅನೇಕ ಹಿರಿಯರು ಹೋರಾಟ ಮಾಡುತ್ತಾ ಬಂದಿದ್ದಾರೆ. ಸಮಾಜ ಸಂಘಟನೆ ಹಾಗೂ ಹೋರಾಟಗಳ ನಂತರ ಪೀಠಗಳು ಸ್ಥಾಪನೆಗೊಂಡಿವೆ. ಹರಿಹರ ಪೀಠದ ಜಗದ್ಗುರುಗಳು ಸರ್ಕಾರದೊಂದಿಗೆ ನಿರಂತರ ಸಂರ್ಪಕದಲ್ಲಿದ್ದಾರೆ. ಮೀಸಲಾತಿ ಘೋಷಣೆಯ ನಂತರ ಕಾನೂನಿನ ತೊಡಕಾಗಬಾರದೆಂದು ಕುಲಶಾಸ್ತ್ರಿಯ ಅಧ್ಯಯನ ವರದಿಗಾಗಿ ಕಾಯಲಾಗುತ್ತಿದೆ. ಇತ್ತೀಚೆಗೆ ಕೂಡಲಸಂಗಮದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸಹ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಬ್ಬರು ಸ್ವಾಮೀಜಿಗಳ ಹೋರಾಟಗಳು ಹಾದಿ ಬದಲಿದ್ದರೂ ಉದ್ದೇಶ ಒಂದೇಯಾಗಿದೆ. ರಾಜ್ಯ ಸಂಘದಡಿಯಲ್ಲಿ ಸಮಾವೇಶ ಆಯೋಜಿಸಲಾಗುತ್ತಿರುವದರಿಂದ ಸಂಘದ ವ್ಯಾಪ್ತಿಗೊಳಪಟ್ಟಿರುವ ಹರಿಹರ ಪೀಠದ ಜಗದ್ಗರುಗಳ ಸಾನ್ನಿಧ್ಯದಲ್ಲಿ ಸಮಾವೇಶ ಜರುಗಲಿದೆ. ಕೂಡಲಸಂಗಮದ ಶ್ರೀ ಬಸವಮೃತ್ಯುಂಜಯ ಶ್ರೀಗಳನ್ನು ಆಹ್ವಾನಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್ ಸೇರಿದಂತೆ 20 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದಾರೆ. ಶಾಸಕರು, ಮಂತ್ರಿಗಳು ಸಮಾಜದ ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಮೀಸಲಾತಿ ಬೇಡಿಕೆ ಈಡೇರುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಹೊಸಪೇಟೆ ತಾಲೂಕು ಅಧ್ಯಕ್ಷ ರಾಜಶೇಖರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ, ರಾಜ್ಯಾಧ್ಯಕ್ಷೆ ಮಂಗಳಾ ಬಸವರಾಜ, ಮಹಿಳಾ ಘಟಕದ ಕೊಪ್ಪಳ ಜಿಲ್ಲಾಧ್ಯಕ್ಷೆ ಸುಮಂಗಳಾ, ರಾಜ್ಯ ಕೋಶಾಧಿಕಾರಿ ಶಶಿಕಲಾ ನಾಗರಾಜ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗುಳಿಗಿ ವೀರೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಗುರುಬಸವರಾಜ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಇದ್ದರು.
More Stories
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್