https://youtu.be/NHc6OMSu0K4?si=SI_K4goOPEgwo6h2
HAMPI TIMES
ಹಂಪಿ ವಿವಿಯಲ್ಲಿ ಸುಜಲಂ-ಜಲತತ್ವ ರಾಷ್ಟ್ರೀಯ ವಿಚಾರ ಸಂಕಿರಣ
ಹೊಸಪೇಟೆ: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪಂಚಭೂತಗಳು ತುಂಬಾ ಮಹತ್ವವಾಗಿದ್ದು, ಅದರಲ್ಲಿ ಒಂದಾದ ನೀರು ಮಾನವ ಸಂಕುಲಕ್ಕೆ ಅತ್ಯಗತ್ಯವಾಗಿದೆ. ಅಂತಹ ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ವಿದೇಶಾಂಗ ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ, ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ನವದೆಹಲಿಯ ದೀನ್‌ದಯಾಳ್ ಸಂಶೋಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸುಜಲಂ-ಜಲತತ್ವ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶನಿವಾರದಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯೊಂದಿಗಿ ಮಾನವನ ಬದುಕಿದೆ. ಈ ನಿಟ್ಟಿನಲ್ಲಿ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿ ಸಂರಕ್ಷಣೆಯೊಂದಿಗೆ ಮತ್ತು ಇದನ್ನು ಅರಿತು ಜೀವನ ನಡೆಸಬೇಕು ಎಂದು ಹೇಳಿದರು.
ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಬೆಳಕು, ಬೆಂಕಿ ಇವುಗಳು ನಮ್ಮ ಪ್ರಕೃತಿಯಿಂದ ದೊರಕುವಂತಹ ಪಂಚಭೂತಗಳು, ಈ ಪಂಚಭೂತಗಳನ್ನು ಕಾಪಾಡಿಕೊಂಡು ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ ಅವರು ನೀರು ಮನುಷ್ಯನಿಗೆ ಬೇಕಾದ ಅತ್ಯಂತ ಪ್ರಮುಖ ಸಂಪನ್ಮೂಲವಾಗಿದೆ. ಕಾಲುವೆ, ಕೆರೆ, ಹಳ್ಳ ಹಾಗೂ ನದಿಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಪ್ರಮುಖ ಉದ್ದೇಶವಾಗಬೇಕು ಎಂದರು.
ದೇಶದಲ್ಲಿ ಹರಿಯುವ ನದಿಗಳನ್ನು ಸಿಂಧು, ಗಂಗಾ, ಯಮುನಾ ಇತ್ಯಾದಿ ಹೆಸರುಗಳಿಂದ ಪೂಜಿಸುತ್ತಿದ್ದು, ಅಂತಹ ನದಿಗಳಲ್ಲಿ ಮನುಷ್ಯನ ಮೃತದೇಹ, ಪ್ಲಾಸ್ಟಿಕ್ ಸೇರಿದಂತೆ ಇತರೆ ರಾಸಾಯನಿಕ ಪದಾರ್ಥಗಳು ಸೇರಿ ಕಲುಷಿತಗೊಳ್ಳುತ್ತಿವೆ. ಹೀಗೆ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಕುಡಿಯಲು ನೀರು ಸಿಗುವುದು ಕಷ್ಟವಾಗಬಹುದು. ಅದ್ದರಿಂದ ನದಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
-
ಅಧ್ಯಯನ ಕೇಂದ್ರ ಕಟ್ಟಡ ಉದ್ಘಾಟನೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲಾಗಿರುವ ನೂತನ ದೀನ್‌ದಯಾಳ್ ಉಪಾಧ್ಯ ಅಧ್ಯಯನ ಕೇಂದ್ರದ ಕಟ್ಟಡವನ್ನು ಇದೇ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಅವರು ಉದ್ಘಾಟಿಸಿದರು.
ಉತ್ತರಕನ್ನಡ ಅಂಕೋಲದ ಪರಿಸರವಾದಿ ಪದ್ಮಶ್ರೀ ತುಳಸಿಗೌಡ ಅವರು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ ಯುವ ಪೀಳಿಗೆಯು ಪರಿಸರವನ್ನು ಪ್ರೀತಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರವಾಸೋದ್ಯಮ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಮಾತನಾಡಿ, ನೀರಿನ ಮಹತ್ವ ಹಾಗೂ ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ನಾವೆಲ್ಲರೂ ಅರಿತು. ನದಿಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ನಮ್ಮ ದೇಶದಲ್ಲಿರುವ ಎಲ್ಲಾ ನದಿಗಳ ಹೆಸರು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇದರಿಂದಾಗಿ ಭಾರತೀಯ ಸಂಸ್ಕೃತಿಯಲ್ಲಿ ನೀರಿನ ಬಗ್ಗೆ ಎಷ್ಟರ ಮಟ್ಟಿಗೆ ಮಹತ್ವವನ್ನು ಹೊಂದಿದೆ ಎಂಬುದನ್ನು ನಾವು ಅರಿಯಬೇಕು ಎಂದು ಹೇಳಿದರು.
ಅನೇಕ ದೇಶಗಳಲ್ಲಿ ನೀರಿಗಾಗಿ ಸಾಕಷ್ಟು ವಾದ, ವಿವಾದಗಳನ್ನು ನಡೆಯುತ್ತಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೀರಿಗಾಗಿ ನದಿಗಳ ಜೋಡಣೆಯನ್ನು ಮಾಡುವ ಯೋಜನೆಯನ್ನು ಅಂದು ಪ್ರಸ್ತಾಪಿಸಿದ್ದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದ ಅವರು ಪರಿಸರವನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯವಶ್ಯಕ ಎಂದು ತಿಳಿಸಿದರು.
ಕನ್ನಡ ವಿವಿಯಲ್ಲಿನ ಹಳ್ಳಿ ಕೆರೆಗೆ ತುಂಗಭದ್ರ ಆರತಿ ನೇರವೇರಿಸಿದರು.
ಹಂಪಿ ಕನ್ನಡ ವಿವಿ ಹಾಗೂ ಬಳ್ಳಾರಿ ಕೃಷ್ಣದೇವರಾಯ ವಿವಿ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ನವದೆಹಲಿಯ ದೀನ್‌ದಯಾಳ್ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್‌ಜೈನ್, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್ ಹಾಗೂ ಕುಲಸಚಿವ ಎಸ್.ಸಿ.ಪಾಟೀಲ್, ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಸ.ಚಿ.ರಮೇಶ ಹಾಗೂ ಕುಲಸಚಿವ ಸುಬ್ಬಣ್ಣ ರೈ ಸೇರಿದಂತೆ ಎರಡು ವಿವಿಯ ವಿವಿಧ ವಿಭಾಗಗಳ ನಿಕಾಯದ ಡೀನರು, ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು, ಇತರರು ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ರಾಜ್ಯಪಾಲರಿಂದ ಹಂಪಿಯ ಐತಿಹಾಸಿಕ ಸುಗ್ರೀವ ಗುಹೆ ವೀಕ್ಷಣೆ