https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್
ಕೂಡ್ಲಿಗಿ: ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ವಿಜಯನಗರ ಜಿಲ್ಲಾ ಸಮಾವೇಶವನ್ನು ನ.12 ರಂದು ಹೊಸಪೇಟೆಯ ಸಾಯಿಲೀಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜರುಗಿದ ವೀ.ಲಿಂ.ಪಂಚಮಸಾಲಿ ಜಿಲ್ಲಾ ಮಟ್ಟದ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವವನ್ನು ಈ ಬಾರಿ ನೂತನ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುತ್ತದೆ. ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳು ಸಾನ್ನಿಧ್ಯವಹಿಸುವರು. ಜಿಲ್ಲೆಯ ಎಲ್ಲಾ ಶಾಸಕರು, ಮಂತ್ರಿಗಳು ಮತ್ತು ಸಂಸದರನ್ನು ಆಹ್ವಾನಿಸಲಾಗುವುದು. ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನ ಗ್ರಾಮೀಣ ಭಾಗದಿಂದಲೂ ಪಂಚಮಸಾಲಿಗಳು ಎಲ್ಲಾ ರೀತಿಯ ಸಹಕಾರ ನೀಡುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಪಂಚಮಸಾಲಿ ಲಿಂಗಾಯತರನ್ನು 2ಎಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಪಂಚಮಸಾಲಿ ಯುವ ಜನಾಂಗದ ಶ್ರಯೋಭಿವೃದ್ಧಿಗಾಗಿ 2ಎ ಮೀಸಲಾತಿ ದೊರಕಿಸಿಕೊಡಬೇಕೆಂದು ಜಿಲ್ಲೆಯ ಮುಖಂಡರೊಂದಿಗೆ ತೆರಳಿ ಜಗದ್ಗುರು ಶ್ರೀ ವಚನಾನಂದ ಶ್ರೀಗಳಿಗೆ ಒತ್ತಾಯಿಸಲಾಗುವುದು ಎಂದರು.
ಸದಸ್ಯತ್ವ ಅಭಿಯಾನ: ಎಲ್ಲಾ ತಾಲೂಕು ಪದಾಧಿಕಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ, ಸದಸ್ಯತ್ವ ನೋಂದಣಿ ಹೆಚ್ಚುಗೊಳಿಸುವ ಮೂಲಕ ಪಂಚಮಸಾಲಿ ಸಂಘಟನೆಯನ್ನು ಬಲಪಡಿಸಬೇಕು. ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಪಂಚಮಸಾಲಿ ಲಿಂಗಾಯತರಿದ್ದಾರೆ. ಆದರೆ ಪಂಚಮಸಾಲಿ ಜನಸಂಖ್ಯೆಯ ಶೇ.1ರಷ್ಟು ಸದಸ್ಯತ್ವ ಇದೂವರೆಗೂ ಆಗಿಲ್ಲ. ಸಮಾಜದ ಹಿರಿಯರು ಸಮಾಜವನ್ನು ಸಂಘಟಿಸಲು ತಳಪಾಯ ಹಾಕಿದ್ದಾರೆ. ಸದಸ್ಯತ್ವದ ನೋಂದಣಿ ಕಾರ್ಯ ಮೂಲಕ ಸಮುದಾಯವನ್ನು ಸಂಘಟಿಸುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ಭಾವಿಸಬೇಕು ಎಂದು ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ತಿಳಿಸಿದರು.
ಜಯಂತ್ಯೋತ್ಸವಕ್ಕೆ 25,೦೦೦ ಜನ ಪಾಲ್ಗೊಳ್ಳವ ನಿರೀಕ್ಷೆ :
ನೂತನ ವಿಜಯನಗರ ಜಿಲ್ಲೆಯಲ್ಲಿ ಪ್ರಥಮವಾಗಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವವನ್ನು ಜಿಲ್ಲಾ ಸಂಘದಿಂದ ಆಚರಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಪಂಚಮಸಾಲಿ ಲಿಂಗಾಯತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮಾಜದ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು. ನ.12 ರಂದು ಹೊಸಪೇಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಂಚಮಸಾಲಿಗರು ಆಗಮಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ವೀ.ಲಿಂ.ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಾವಿಬೆಟ್ಟಪ್ಪ ಹೇಳಿದರು.
ಜಿಲ್ಲಾ ಗೌರವಧ್ಯಕ್ಷ ಮರಬದ ಶಿವಣ್ಣ, ತಾಲೂಕು ಅಧ್ಯಕ್ಷರಾದ ಹೆಚ್. ರೇವಣ್ಣ ತರಕಾರಿ, ಚಂದ್ರಪ್ಪ, ಎಂ.ರಾಜಶೇಖರ, ಅಕ್ಕಿ ಶಿವಕುಮಾರ, ಜಿ.ಪತ್ರೆಪ್ಪ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ರಾಜ್ಯ ಮಹಿಳಾ ಘಟಕದ ಖಜಾಂಚಿ ಶಶಿಕಲಾ ನಾಗರಾಜ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್, ಹಿರಿಯರಾದ ಚಿದಾನಂದಪ್ಪ ಇತರರು ಇದ್ದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿಯ ಗುಳಿಗಿ ವೀರೇಂದ್ರ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರೆಂದು ಘೋಷಿಸಿ, ಸನ್ಮಾನಿಸಲಾಯಿತು.
More Stories
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ